‘ಈ ಸಲ ಕಪ್ ನಮ್ದೆ’: 17 ವರ್ಷಗಳ ಆಸೆ ಈಡೇರಿಸಿದ ಕನ್ನಡದ ಹುಡುಗಿಯರು!

‘ಈ ಸಲ ಕಪ್ ನಮ್ದೆ’: 17 ವರ್ಷಗಳ ಆಸೆ ಈಡೇರಿಸಿದ ಕನ್ನಡದ ಹುಡುಗಿಯರು!

ಕನ್ನಡಿಗರ ಕಣ ಕಣದಲ್ಲೂ ಬೆರೆತು ಹೋಗಿರುವ ಆರ್‌ಸಿಬಿ ತಂಡಕ್ಕೆ ಈ ದಿನ ಸುದಿನ. ಈ ದಿನವನ್ನು ನಮ್ಮ ಕನ್ನಡಿಗರು ಅದರಲ್ಲೂ ಕ್ರಿಕೆಟ್ ಅಭಿಮಾನಿಗಳು, ಇನ್ನೂ ಮೀರಿ RCBಯ ಪಕ್ಕಾ ಅಭಿಮಾನಿಗಳು ತಮ್ಮ ಜೀವ ಇರುವವರೆಗೂ ಮರೆಯೋದಿಲ್ಲ. ಯಾಕಂದ್ರೆ ನಾವೆಲ್ಲ 17 ವರ್ಷಗಳಿಂದ ಉಸಿರು ಬಿಗಿ ಹಿಡಿದು ಯಾವ ದಿನಕ್ಕಾಗಿ ಕಾಯುತ್ತಾ ಇದ್ದೆವೋ, ಆ ದಿನ ಇಂದು ಬಂದೇ ಬಿಟ್ಟಿದೆ. ನಮ್ಮ ಆರ್‌ಸಿಬಿ (Royal Challengers Bengaluru) ತಂಡ ಕಪ್ ಗೆದ್ದೇ ಬಿಟ್ಟಿದೆ! ಹೌದು ಹುಡುಗರು ಮಾಡದ ಕೆಲಸವನ್ನ ನಮ್ಮ ‘ಆರ್‌ಸಿಬಿ’ ಹುಡುಗಿಯರು ಮಾಡಿದ್ದಾರೆ. ಅದರಲ್ಲೂ ಬೆಂಗಳೂರು ಕ್ರಿಕೆಟ್ ಅಭಿಮಾನಿಗಳು ಇಂದು ಹೆಮ್ಮೆಯಿಂದ ಆರ್‌ಸಿಬಿ ಬಾವುಟ ಹಿಡಿದು, ಜೋರಾಗಿ ಆರ್‌ಸಿಬಿ ಎಂದು ಘರ್ಜಿಸುವ ಅವಕಾಶ ಕೊಟ್ಟಿದ್ದಾರೆ. 2024ರ ಸಾಲಿನ ವುಮೆನ್ಸ್ ಪ್ರಿಮಿಯರ್ ಲೀಗ್ ಅಂದ್ರೆ ಡಬ್ಲ್ಯೂಪಿಎಲ್ (WPL) ಟೂರ್ನಿ ಗೆದ್ದು ಬೀಗಿ ಆರ್‌ಸಿಬಿ ತಂಡಕ್ಕೆ ಮೊಟ್ಟ ಮೊದಲ ಕಪ್ ತಂದುಕೊಟ್ಟಿದ್ದಾರೆ. ಇದುವರೆಗೆ ಹುಡುಗರ ತಂಡ ಐಪಿಎಲ್ (IPL) ಟೂರ್ನಿಯಲ್ಲಿ ಮಾಡದ ಸಾಧನೆಯನ್ನು, ನಮ್ಮ ಆರ್‌ಸಿಬಿ ಹುಡುಗಿಯರು ಇದೀಗ ಡಬ್ಲ್ಯೂಪಿಎಲ್ (WPL) ಟೂರ್ನಿಯಲ್ಲಿ ಸಾಧಿಸಿ ತೋರಿಸಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ ಮಣ್ಣು ಮುಕ್ಕಿಸಿ ಆರ್‌ಸಿಬಿ ಬೆಂಗಳೂರು ತಂಡ ಈಗ ಕಪ್ ಗೆದ್ದು ಅದಕ್ಕೆ ಮುತ್ತಿಕ್ಕಿದೆ.

ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರ್‌ಸಿಬಿ ತಂಡದ ಹುಡುಗಿಯರ ಬೌಲಿಂಗ್ ದಾಳಿಗೆ ಪೀಸ್ ಪೀಸ್ ಆಗಿ ಹೋಗಿತ್ತು. ಈ ಮೂಲಕ ಕೇವಲ 113 ರನ್‌ಗಳಿಗೆ ಈ ದೆಹಲಿ ತಂಡವು ಆಲೌಟ್‌ ಆಗಿ ಹೋಗಿತ್ತು. ಇನ್ನು 114 ರನ್‌ಗಳ ಗುರಿ ಬೆನ್ನುಹತ್ತಿದ್ದ ನಮ್ಮ ಆರ್‌ಸಿಬಿ ಹುಡುಗಿಯರು ಇದೀಗ ಇತಿಹಾಸ ನಿರ್ಮಿಸಿದ್ದಾರೆ. ಕೇವಲ 2 ವಿಕೆಟ್ ಕಳೆದುಕೊಂಡು ನಮ್ಮ ಆರ್‌ಸಿಬಿ ತಂಡ ಇದೀಗ ದೆಹಲಿ ಕ್ಯಾಪಿಟಲ್ಸ್ ನೀಡಿದ್ದ 114 ರನ್‌ಗಳ ಗುರಿ ಮುಟ್ಟಿದೆ. ಈ ಮೂಲಕ 17 ವರ್ಷಗಳ ನಂತರ ಆರ್‌ಸಿಬಿ ತಂಡ ಕಪ್ ಗೆದ್ದಿದೆ. ಅದೂ ಬೆಂಗಳೂರು ಟೀಂ ಹುಡುಗಿಯರು ಈ ಸಾಧನೆ ಮಾಡಿರುವುದು ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ದೆಹಲಿ ತಂಡಕ್ಕೆ ಆರಂಭದಲ್ಲೇ ಶಾಕ್! ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ದೆಹಲಿ ಕ್ಯಾಪಿಟಲ್ಸ್, ಮೊದಲಿಗೆ ಒಳ್ಳೆಯ ಆಟವನ್ನೇ ಆಡಿತ್ತು. ಆದರೆ ಪವರ್ ಪ್ಲೇ ನಂತರ ದೆಹಲಿ ತಂಡದ ಗ್ರಹಚಾರ ಬದಲಾಗಿತ್ತು. 2024ರ ಡಬ್ಲ್ಯೂಪಿಎಲ್ (WPL) ಫೈನಲ್ ಪಂದ್ಯದಲ್ಲಿ, ಆರ್‌ಸಿಬಿ ತಂಡದ ಆರಂಭವಂತೂ ತುಂಬಾನೆ ಕಷ್ಟದಿಂದ ಕೂಡಿತ್ತು. ಅದ್ರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇನ್ನಿಂಗ್ಸ್ ಆರಂಭಿಸಿದ ನಾಯಕಿ ಮೆಗ್ ಲ್ಯಾನಿಂಗ್ & ಶಫಾಲಿ ವರ್ಮಾ ಪವರ್‌ ಪ್ಲೇ ಓವರ್‌ಗಳಲ್ಲಿ ಭರ್ಜರಿ ಬ್ಯಾಟಿಂಗ್‌ನ ಮಾಡಿದರು. ಈ ಜೋಡಿಯು ಮೊದಲನೇ ವಿಕೆಟ್‌ಗೆ, ಕೇವಲ 7 ಓವರ್‌ಗಳಲ್ಲಿ 64 ರನ್‌ನ ಚಚ್ಚಿ ಬಿಸಾಡಿತ್ತು.

ಆದ್ರೆ 8ನೇ ಓವರ್‌ ಎಸೆಯಲು ಬಂದ ಸೋಫಿ ಮೊಲಿನೆಕ್ಸ್ ಮೊದಲ ಎಸೆತಕ್ಕೆ ಭರ್ಜರಿ ಪ್ಲೇಯರ್ ಶಫಾಲಿ ವರ್ಮಾ ವಿಕೆಟ್ ಪಡೆದು ಪೆವಿಲಿಯನ್ ಗೂಡಿಗೆ ಕಳಿಸಿದರು. ಅಲ್ಲಿಂದಲೇ ನೋಡಿ, ದೆಹಲಿಗೆ ಶುರುವಾಗಿದ್ದು ಗ್ರಹಚಾರ. ಮುಂದೆ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅಬ್ಬರಿಸಿದ್ರು. ನೋಡ ನೋಡುತ್ತಲೇ ದೆಹಲಿ ಕ್ಯಾಪಿಟಲ್ಸ್ ತಂಡ, ತನ್ನೆಲ್ಲಾ ವಿಕೆಟ್ ಕಳೆದುಕೊಂಡು 113 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಆರ್‌ಸಿಬಿ ತಂಡಕ್ಕೆ ಸುಲಭದ ಮೊತ್ತ ನೀಡಿತ್ತು. ಶ್ರೇಯಾಂಕಾ ಅಬ್ಬರಕ್ಕೆ ದಾಖಲೆ ಉಡೀಸ್! ಆರ್‌ಸಿಬಿ ಬೌಲಿಂಗ್ ಹೇಗಿತ್ತು ಅಂದ್ರೆ ದೆಹಲಿ ತಂಡಕ್ಕೆ ಎಲ್ಲೂ ಗೆಲ್ಲುವ ಆಸೆ ಮೂಡಲೇ ಇಲ್ಲ ಬಿಡಿ. ಶ್ರೇಯಾಂಕಾ ಪಾಟೀಲ್ 3.3 ಓವರ್‌ಗಳಲ್ಲಿ 12 ರನ್ ನೀಡಿ 4 ವಿಕೆಟ್ ಕಬಳಿಸಿದರೆ ಸೋಫಿ ಮೊಲಿನೆಕ್ಸ್ 4 ಓವರ್‌ಗಳಲ್ಲಿ 20 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ಆಶಾ ಸೋಬನಾ 3 ಓವರ್‌ಗಳಲ್ಲಿ ಕೇವಲ 14 ರನ್ ನೀಡಿ 2 ವಿಕೆಟ್ ಪಡೆದರು. ಈ ಮೂಲಕ ದೆಹಲಿ ತಂಡವನ್ನು 113 ರನ್‌ಗೆ ಆಲೌಟ್ ಮಾಡಿತು ಆರ್‌ಸಿಬಿ ತಂಡ. ಈ ಗುರಿಯನ್ನು ಬೆನ್ನತ್ತಿದ್ದ ನಮ್ಮ ಆರ್‌ಸಿಬಿ (Royal Challengers Bengaluru) ತಂಡ ಸುಲಭವಾಗಿ ಗುರಿ ತಲುಪಿದೆ. ಹಾಗೇ ಭರ್ಜರಿ 8 ವಿಕೆಟ್ ಅಂತರದ ಗೆಲುವನ್ನ ಕಂಡು ಕೊನೆಗೂ ಕಪ್ ಮನೆಗೆ ತಂದಿದೆ.

Previous Post
ಗುಜರಾತ್‌ನ ಹಾಸ್ಟೆಲ್‌ನಲ್ಲಿ ನಮಾಜ್‌ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಪಿನಿಂದ ಹಲ್ಲೆ
Next Post
ಮಾ. 21ರೊಳಗೆ ಎಲ್ಲಾ ಚುನಾವಣಾ ಬಾಂಡ್ ಡೇಟಾ ಬಹಿರಂಗಪಡಿಸಿ; ಎಸ್‌ಬಿಐಗೆ ಸುಪ್ರೀಂ ಸೂಚನೆ

Recent News