ಕೇಜ್ರಿವಾಲ್ ಬಂಧನದ ವಿರುದ್ಧ ಎಎಪಿಯಿಂದ ಸಹಿ ಅಭಿಯಾನ

ಕೇಜ್ರಿವಾಲ್ ಬಂಧನದ ವಿರುದ್ಧ ಎಎಪಿಯಿಂದ ಸಹಿ ಅಭಿಯಾನ

ನವದೆಹಲಿ, ಏ. 2: ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ವಿರುದ್ಧ ಆಮ್ ಆದ್ಮಿ ಪಕ್ಷ ಗುರುವಾರ ಸಹಿ ಅಭಿಯಾನವನ್ನು ಪ್ರಾರಂಭಿಸಿದೆ. ಮಾರ್ಚ್ 21ರಂದು ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಂಧಿಸಿತ್ತು. ಮೇ 7ರವರೆಗೆ ಅವರು ತಿಹಾರ್ ಜೈಲಿನಲ್ಲಿದ್ದಾರೆ. ಜನರು ಕೇಜ್ರಿವಾಲ್‌ಗೆ ತಮ್ಮ ಸಂದೇಶಗಳನ್ನು ಬರೆಯಲು ಲಜಪತ್ ನಗರದಲ್ಲಿ ಎರಡು ಫಲಕಗಳನ್ನು ಅಳವಡಿಸಲಾಗಿದೆ.

ಎಪಿ ಜಂಗ್ಪುರ ಶಾಸಕ ಪ್ರವೀಣ್ ಕುಮಾರ್ ಈ ಬಗ್ಗೆ ಮಾತನಾಡಿದ್ದು, ದೆಹಲಿಯ ಜನರು ತಮ್ಮ ಮುಖ್ಯಮಂತ್ರಿಯನ್ನು ಪ್ರೀತಿಸುತ್ತಾರೆ ಎಂದು ಭಾರತೀಯ ಜನತಾ ಪಕ್ಷಕ್ಕೆ ತೋರಿಸಿ ಕೊಡಲು ನಗರದ ವಿವಿಧ ಭಾಗಗಳಲ್ಲಿ ಸಹಿ ಅಭಿಯಾನವನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ. ನಾವು ಈ ಅಭಿಯಾನವನ್ನು ಇಲ್ಲಿಂದ ಪ್ರಾರಂಭಿಸಿದ್ದೇವೆ ಮತ್ತು ಅದನ್ನು ವಿವಿಧ ಪ್ರದೇಶಗಳಿಗೆ ವಿಸ್ತರಿಸುತ್ತೇವೆ. ನಾವು ಈ ಸಹಿಗಳನ್ನು ಸಂಗ್ರಹಿಸಿ ಬಿಜೆಪಿಗೆ ಕಳುಹಿಸುತ್ತೇವೆ ಮತ್ತು ದೆಹಲಿಯ ಜನರು ಕೇಜ್ರಿವಾಲ್ ಅವರನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ತೋರಿಸುತ್ತೇವೆ ಎಂದು ಹೇಳಿದ್ದಾರೆ.

ಈ ವೇಳೆ ಎಎಪಿ ಪಕ್ಷದ ಕಾರ್ಯಕರ್ತರು ‘ಜೈಲ್ ಕಾ ಜವಾಬ್ ವೋಟ್ ಸೇ ದೇಂಗೆ’ ಮತ್ತು ‘ಅರವಿಂದ್ ಕೇಜ್ರಿವಾಲ್ ಜಿಂದಾಬಾದ್’ ಘೋಷಣೆಗಳನ್ನು ಕೂಗಿದ್ದಾರೆ. ಸಿಎಂ ಕೇಜ್ರಿವಾಲ್ ಅವರನ್ನು ಜೈಲಿನಲ್ಲಿಟ್ಟ ರೀತಿಗೆ ದೆಹಲಿಯ ಜನರು ತೀವ್ರ ಕೋಪಗೊಂಡಿದ್ದಾರೆ. ಜನರು ಸರ್ವಾಧಿಕಾರ ಮತ್ತು ಕೇಜ್ರಿವಾಲ್‌ ಬಂಧನದ ವಿರುದ್ಧ ತಮ್ಮ ಮತಗಳ ಮೂಲಕ ಪ್ರತಿಕ್ರಿಯಿಸುತ್ತಾರೆ ಎಂದು ಎಎಪಿ ಪೂರ್ವ ದೆಹಲಿ ಲೋಕಸಭಾ ಅಭ್ಯರ್ಥಿ ಕುಲದೀಪ್ ಕುಮಾರ್ ಹೇಳಿದ್ದಾರೆ.
ಈಗ ರದ್ದಾದ ದೆಹಲಿ ಮದ್ಯ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ಅವರು ಏಪ್ರಿಲ್ 1ರಿಂದ ತಿಹಾರ್ ಜೈಲಿನಲ್ಲಿದ್ದು, ಮೇ 7ರವರೆಗೆ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 2021-22ರ ಅಬಕಾರಿ ನೀತಿಯನ್ನು ರೂಪಿಸುವ ಪಿತೂರಿಯಲ್ಲಿ ಅರವಿಂದ್ ಕೇಜ್ರಿವಾಲ್ ಭಾಗಿಯಾಗಿದ್ದಾರೆ. ನಿರ್ದಿಷ್ಟ ವ್ಯಕ್ತಿಗಳಿಗೆ ಸಹಾಯ ಮಾಡಲು ಮತ್ತು ಸದರಿ ನೀತಿಯ ಮೂಲಕ ಮದ್ಯದ ಉದ್ಯಮಿಗಳಿಂದ ಕಿಕ್‌ಬ್ಯಾಕ್‌ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ ಬಂಧನವಾಗುತ್ತಿದ್ದಂತೆ ಈ ಹಿಂದೆ ದೆಹಲಿ ಹೈಕೋರ್ಟ್‌ಗೆ ಕೇಜ್ರಿವಾಲ್‌ ಅವರನ್ನು ಸಿಎಂ ಹದ್ದೆಯಿಂದ ವಜಾಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಕೇಜ್ರಿವಾಲ್‌ ಅವರನ್ನು ಸಿಎಂ ಹುದ್ದೆಯಿಂದ ವಜಾಕ್ಕೆ ನಿರಾಕರಿಸಿತ್ತು. ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಕೇಜ್ರಿವಾಲ್ ಅವರ ವೈಯಕ್ತಿಕ ಆಯ್ಕೆಯಾಗಿದೆ. ಈ ವಿಷಯದಲ್ಲಿ ನ್ಯಾಯಾಂಗದ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶವಿಲ್ಲ ಮತ್ತು ರಾಜ್ಯದ ಇತರ ಅಂಗಗಳು ಈ ಸಮಸ್ಯೆಯನ್ನು ಪರಿಶೀಲಿಸಬೇಕು ಎಂದು ಕೋರ್ಟ್‌ ಹೇಳಿತ್ತು.

Previous Post
ಪದೇ ಪದೇ ಸುಳ್ಳು ಹೇಳುತ್ತಿರುವುದರಿಂದ ಮೋದಿಗೆ ಕಾಂಗ್ರೆಸ್‌ ಪ್ರಣಾಳಿಕೆ ವಿವರಿಸಿ ಪತ್ರ ಬರೆದ ಖರ್ಗೆ
Next Post
ಲೈಂಗಿಕ ಕಿರುಕುಳದ ಆರೋಪಿ ಬ್ರಿಜ್ ಭೂಷಣ್ ಮಗನಿಗೆ ಬಿಜೆಪಿ ಟಿಕೆಟ್

Recent News