ಗಾಂಧಿ ಕುಟುಂಬದ ಭದ್ರಕೋಟೆ ರಾಯ್ ಬರೇಲಿ

ಗಾಂಧಿ ಕುಟುಂಬದ ಭದ್ರಕೋಟೆ ರಾಯ್ ಬರೇಲಿ

ನವದೆಹಲಿ : ಗಾಂಧಿ ಕುಟುಂಬದ ಭದ್ರಕೋಟೆ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧಿಸಿದ್ದಾರೆ. ಇಂದು ಸೋನಿಯಗಾಂಧಿ, ಪ್ರಿಯಾಂಕಗಾಂಧಿ, ರಾಬರ್ಟ್ ವಾದ್ರಾ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ರಾಯ್ ಬರೇಲಿ ಮತ್ತು ಅಮೇಥಿಯಿಂದ ಅಭ್ಯರ್ಥಿ ಯಾರು ಎನ್ನುವ ಬಗ್ಗೆ ಸಾಕಷ್ಟ ಚರ್ಚೆಯಾಗಿತ್ತು. ಅಂತಿಮವಾಗಿ ಇಂದು ಬೆಳಗ್ಗೆ ರಾಯ್ ಬರೇಲಿಯಿಂದ ರಾಹುಲ್ ಗಾಂಧಿ, ಅಮೇಥಿಯಿಂದ ಕಿಶೋರಿ ಲಾಲ್ ಶರ್ಮಾ ಅವರ ಹೆಸರನ್ನು ಎಐಸಿಸಿ ಕಡೆಯಿಂದ ಘೋಷಿಸಲಾಯಿತು‌.

ರಾಹುಲ್ ಗಾಂಧಿ ರಾಯ್ ಬರೇಲಿಯಿಂದ ಸ್ಪರ್ಧಿಸುತ್ತಿರುವ ಗಾಂಧಿ ಕುಟುಂಬದ ಎಂಟನೇ ಸದಸ್ಯರಾಗಿದ್ದಾರೆ. ರಾಯ್ ಬರೇಲಿಯಲ್ಲಿ ಮೊದಲ ಲೋಕಸಭೆ ಚುನಾವಣೆಯಿಂದ ಈವರೆಗೂ ಹಲವು ಏಳುಬೀಳುಗಳನ್ನು ನೋಡಿದೆ. ಅದಾಗ್ಯೂ ಕ್ಷೇತ್ರದ ಜನರು ಬಹುತೇಕ ಸಂದರ್ಭದಲ್ಲಿ ಗಾಂಧಿ ಕುಟುಂಬದ್ದೇ ಮೇಲುಗೈ ಮಾಡಿದ್ದಾರೆ.

ರಾಯ್ ಬರೇಲಿ ಲೋಕಸಭೆ ಚುನಾವಣಾ ಇತಿಹಾಸ ಸಾಕಷ್ಟು ಕುತೂಹಲಕಾರಿ ಘಟ್ಟಗಳನ್ನು ನೋಡಿದೆ. 1951-52 ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ರಾಯ್ ಬರೇಲಿ ಮತ್ತು ಪ್ರತಾಪಗಢ ಜಿಲ್ಲೆಗಳನ್ನು ಒಳಗೊಂಡ ಒಂದು ಲೋಕಸಭಾ ಸ್ಥಾನವಿತ್ತು. ಇಂದಿರಾಗಾಂಧಿ ಅವರ ಪತಿ ಫಿರೋಜ್ ಗಾಂಧಿ ಅವರು ಇಲ್ಲಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು. 1957ರಲ್ಲಿ ರಾಯ್ ಬರೇಲಿ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗ ಫಿರೋಜ್ ಗಾಂಧಿ ಮತ್ತೊಮ್ಮೆ ಇಲ್ಲಿಂದ ಸಂಸದರಾದರು. ಇಂದಿರಾ ಮತ್ತು ಫಿರೋಜ್ ಗಾಂಧಿ 26 ಮಾರ್ಚ್ 1942 ರಂದು ವಿವಾಹವಾದರು.

1960 ರಲ್ಲಿ ಫಿರೋಜ್ ಗಾಂಧಿಯವರು ರಾಯ್ ಬರೇಲಿಯಿಂದ ನಾಲ್ಕು ಚುನಾವಣೆಗಳಿಗೆ ಸ್ಪರ್ಧಿಸಿದರು. ನಂತರ ನಡೆದ ಉಪಚುನಾವಣೆ ಹಾಗೂ 1962ರ ಚುನಾವಣೆಗಳಲ್ಲಿ ಗಾಂಧಿ ಕುಟುಂಬದ ಯಾರೂ ಇಲ್ಲಿಂದ ಸ್ಪರ್ಧಿಸಿರಲಿಲ್ಲ. 1962ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬೈಜನಾಥ ಕುರಿಲ್‌ ಜನಸಂಘದ ಅಭ್ಯರ್ಥಿ ತಾರಾವತಿ ಅವರನ್ನು ಸೋಲಿಸಿದ್ದರು. ಫಿರೋಜ್ ಗಾಂಧಿಯವರ ಮರಣದ ನಾಲ್ಕು ವರ್ಷಗಳ ನಂತರ ಇಂದಿರಾ ಗಾಂಧಿ 1964 ರಲ್ಲಿ ರಾಜ್ಯಸಭೆಯನ್ನು ತಲುಪಿದರು. ಇಂದಿರಾ 1967 ರವರೆಗೆ ರಾಜ್ಯಸಭಾ ಸಂಸದರಾಗಿದ್ದರು. 1966ರಲ್ಲಿ ಇಂದಿರಾ ದೇಶದ ಮೊದಲ ಮಹಿಳಾ ಪ್ರಧಾನಿಯಾದಾಗಲೂ ರಾಜ್ಯಸಭಾ ಸದಸ್ಯೆಯಾಗಿದ್ದರು. 1967 ಇಂದಿರಾ ರಾಯ್ ಬರೇಲಿ ಕ್ಷೇತ್ರದಿಂದ ಚುನಾವಣಾ ರಾಜಕೀಯ ಪ್ರವೇಶಿಸಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಇಂದಿರಾ ಅವರು ಸ್ವತಂತ್ರ ಅಭ್ಯರ್ಥಿ ಬಿ.ಸಿ.ಸೇಠ್ ಅವರನ್ನು 91,703 ಮತಗಳಿಂದ ಸೋಲಿಸಿದ್ದರು.

1971ರ ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದಿಂದ ಕಣದಲ್ಲಿದ್ದು, ಸಂಯುಕ್ತ ಸಮಾಜವಾದಿ ಪಕ್ಷದ ರಾಜ್ ನಾರಾಯಣ್ ಅವರನ್ನ 1,11,810 ಮತಗಳ ಅಂತರದಿಂದ ಸೋಲಿಸಿದರು. ಆದರೆ, ಇಂದಿರಾ ಗಾಂಧಿ ಅವರು ಸರ್ಕಾರಿ ಯಂತ್ರಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಚುನಾವಣಾ ರಿಗ್ಗಿಂಗ್ ಮಾಡಿದ್ದಾರೆ ಎಂದು ಆರೋಪಿಸಿ ರಾಜನಾರಾಯಣ್ ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿದರು. ಅರ್ಜಿಯ ತೀರ್ಪನ್ನು ನೀಡುವಾಗ, ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿಯವರ ಚುನಾವಣೆ ಅಕ್ರಮ ಎಂದು ಘೋಷಿಸಿತು. ಇಂದಿರಾ ಅವರು ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ಕೆಲವು ದಿನಗಳ ನಂತರ, ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು.

ತುರ್ತುಪರಿಸ್ಥಿತಿಯ ಅವಧಿ ಮುಗಿದ ನಂತರ 1977ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಯಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಂದಿರಾಗಾಂಧಿ ಸೋಲನುಭವಿಸಬೇಕಾಯಿತು. ಅವರನ್ನು ಭಾರತೀಯ ಲೋಕದಳದ ಅಭ್ಯರ್ಥಿ ರಾಜನಾರಾಯಣ್ 55,202 ಮತಗಳಿಂದ ಸೋಲಿಸಿದರು. 1984ರ ಲೋಕಸಭೆ ಚುನಾವಣೆಯಲ್ಲಿ ಅರುಣ್ ನೆಹರೂ ಕೂಡ ಈ ಕ್ಷೇತ್ರದಿಂದ ಗೆದ್ದಿದ್ದರು. ಇದಾದ ಕೆಲವು ವರ್ಷ ಬಿಜೆಪಿ ಮತ್ತು ಲೋಕದಳ ಇಲ್ಲಿ ಸ್ಪರ್ಧಿಸಿ ಗೆದ್ದಿದ್ದವು.

2004 ರಲ್ಲಿ, ರಾಹುಲ್ ಗಾಂಧಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದಾಗ, ಸೋನಿಯಾ ಗಾಂಧಿ ಅವರಿಗೆ ಅಮೇಥಿ ಸ್ಥಾನವನ್ನು ಬಿಟ್ಟುಕೊಟ್ಟು ರಾಯ್ ಬರೇಲಿಯಿಂದ ಸ್ಪರ್ಧಿಸಲು ಪ್ರಾರಂಭಿಸಿದರು. 2004ರ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರು ಎಸ್‌ಪಿಯ ಅಶೋಕ್ ಕುಮಾರ್ ಸಿಂಗ್ ಅವರನ್ನು ಸೋಲಿಸಿದರು. 2009ರ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಚುನಾವಣೆಯಲ್ಲಿ ಸೋನಿಯಾ ಅವರು ಬಿಎಸ್‌ಪಿ ಟಿಕೆಟ್‌ನಲ್ಲಿದ್ದ ಆರ್‌ಎಸ್‌ ಕುಶ್ವಾಹಾ ವಿರುದ್ಧ ದೊಡ್ಡ ಗೆಲುವು ದಾಖಲಿಸಿದರು. 2014 ರಲ್ಲಿ ಸೋನಿಯಾ ಗಾಂಧಿ ಅವರು ಈ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದರು. ಬಿಜೆಪಿಯ ಅಜಯ್ ಅಗರ್ವಾಲ್ ಅವರನ್ನು 3,52,713 ಮತಗಳಿಂದ ಸೋಲಿಸಿದರು. ಕಳೆದ ಚುನಾವಣೆಯಲ್ಲಿ ಅಂದರೆ 2019 ರಲ್ಲಿ ಸೋನಿಯಗಾಂಧಿ ಗೆದ್ದರು ಗೆಲುವಿನ ಅಂತರ ಕಡಿಮೆಯಾಗಿದೆ. ಈ ಬಾರಿ ರಾಹುಲ್ ಗಾಂಧಿ ಸ್ಪರ್ಧೆ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.

Previous Post
ಕೇಜ್ರಿವಾಲ್ ಮಧ್ಯಂತರ ಜಾಮೀನು ಅರ್ಜಿ ಪರಿಗಣಿಸಬಹುದಾಗಿದೆ – ಸುಪ್ರೀಂ
Next Post
“ಹೆದರಬೇಡಿ, ಹೆದರಿ ಓಡಬೇಡಿ” ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ ಮೋದಿ

Recent News