ಚುನಾವಣಾ ಬಾಂಡ್‌ಗಳ ಬಗ್ಗೆ ಮಾಹಿತಿ ನೀಡಲು ಜೂನ್ 30ರವರೆಗೆ ಗಡುವು ವಿಸ್ತರಿಸಲು ಎಸ್‌ಬಿಐ ಮನವಿ

ಚುನಾವಣಾ ಬಾಂಡ್‌ಗಳ ಬಗ್ಗೆ ಮಾಹಿತಿ ನೀಡಲು ಜೂನ್ 30ರವರೆಗೆ ಗಡುವು ವಿಸ್ತರಿಸಲು ಎಸ್‌ಬಿಐ ಮನವಿ

ನವದೆಹಲಿ: ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ಬಗ್ಗೆ ಮಾಹಿತಿ ನೀಡಲು ಜೂನ್ 30ರವರೆಗೆ ಗಡುವನ್ನು ವಿಸ್ತರಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ. ಕಳೆದ ತಿಂಗಳ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಚುನಾವಣಾ ಬಾಂಡ್‌ ಯೋಜನೆಯನ್ನು ರದ್ದುಗೊಳಿಸಿತ್ತು ಮತ್ತು ಮಾರ್ಚ್ 6 ರೊಳಗೆ ಚುನಾವಣಾ ಆಯೋಗಕ್ಕೆ ಬಾಂಡ್‌ಗಳ ಕುರಿತು ಮಾಹಿತಿ ನೀಡುವಂತೆ ಎಸ್‌ಬಿಐಗೆ ಸೂಚಿಸಿತ್ತು.

ಚುನಾವಣಾ ಬಾಂಡ್ ಅಸಂವಿಧಾನಿಕ. ಅನಾಮಧೇಯ ಬಾಂಡ್‌ಗಳು ಸಂವಿಧಾನದ 19(1)(ಎ) ವಿಧಿಯ ಅಡಿಯಲ್ಲಿ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತ್ತು. ರಾಜಕೀಯ ಪಕ್ಷಗಳಿಗೆ ಆರ್ಥಿಕ ಬೆಂಬಲ ನೀಡುವುದು ಖ್ವಿಡ್‌ ಪ್ರೊ ಪ್ರೊಗೆ (ಅಂದರೆ ಒಂದು ಸಹಾಯ ಮಾಡಿದ್ದಕ್ಕಾಗಿ ಇನ್ನೊಂದು ಪ್ರಯೋಜನ ಪಡೆಯುವುದು) ಕಾರಣವಾಗಬಹುದೆಂದೂ ಸುಪ್ರೀಂ ಕೋರ್ಟ್‌ ಹೇಳಿತ್ತು.

ತೀರ್ಪು ಪ್ರಕಟಿಸುವ ವೇಳೆ, ಚುನಾವಣಾ ಬಾಂಡ್‌ ನೀಡುವುದನ್ನು ನಿಲ್ಲಿಸುವಂತೆ ಮತ್ತು ಈ ರೀತಿಯಲ್ಲಿ ನೀಡಿದ ದೇಣಿಗೆಗಳ ವಿವರಗಳನ್ನು ಮಾರ್ಚ್‌ 6ರೊಳಗೆ ಚುನಾವಣಾ ಆಯೋಗಕ್ಕೆ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಎಸ್‌ಬಿಐ ನೀಡಿದ ಮಾಹಿತಿಗಳನ್ನು ಮಾರ್ಚ್ 13 ರೊಳಗೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಚುನಾವಣಾ ಆಯೋಗಕ್ಕೆ ಕೋರ್ಟ್‌ ಸೂಚಿಸಿತ್ತು.

ಐವರು ನ್ಯಾಯಾಧೀಶರ ಸಂವಿಧಾನ ಪೀಠ, ಕಾಳಧನ ನಿಯಂತ್ರಣಕ್ಕೆ ಚುನಾವಣಾ ಬಾಂಡ್‌ ಯೋಜನೆ ಒಂದೇ ಆಯ್ಕೆಯಲ್ಲ ಎಂದಿತ್ತು. ಕಾಳಧನ ನಿಯಂತ್ರಣವೆಂದು ಹೇಳಿಕೊಂಡು ಆರ್‌ಟಿಐ ಉಲ್ಲಂಘನೆಯಾಗಬಾರದು. ಕಾಳಧನ ನಿಯಂತ್ರಣಕ್ಕೆ ಇತರ ಪರ್ಯಾಯಗಳಿವೆ ಎಂದು ಹೇಳಿತ್ತು. ಎಸ್‌ಬಿಐಯ ಅರ್ಜಿ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನರೇಂದ್ರ ಮೋದಿಯವರು ದೇಣಿಗೆ ವ್ಯವಹಾರವನ್ನು ಮರೆಮಾಚಲು ತಮ್ಮ ಕೈಲಾದಷ್ಟು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Previous Post
ಇಡಿ ಇಕ್ಕಳದಲ್ಲಿ ಸಿಲುಕಿ ನಲುಗಿದ್ದ ಡಿಸಿಎಂ ಡಿಕೆ ಶಿವಕುಮಾರ್‌ಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ – ಇಡಿ ಕೇಸ್ ರದ್ದು
Next Post
ನದಿಯೊಳಗಿನ ಮೆಟ್ರೋ ಸುರಂಗ, ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ

Recent News