ತಮಿಳುನಾಡಿನ ಆರು ಕ್ಷೇತ್ರಗಳ ಮೇಲೆ ಬಿಜೆಪಿ ಗಮನ ಕರ್ನಾಟಕದ ಬಳಿಕ ಡ್ರಾವಿಡ ನೆಲದಲ್ಲಿ ಅಸ್ತಿತ್ವಕ್ಕೆ ಶತ ಪ್ರಯತ್ನ

ತಮಿಳುನಾಡಿನ ಆರು ಕ್ಷೇತ್ರಗಳ ಮೇಲೆ ಬಿಜೆಪಿ ಗಮನ ಕರ್ನಾಟಕದ ಬಳಿಕ ಡ್ರಾವಿಡ ನೆಲದಲ್ಲಿ ಅಸ್ತಿತ್ವಕ್ಕೆ ಶತ ಪ್ರಯತ್ನ

ನವದೆಹಲಿ : ಉತ್ತರ ಭಾರತದಲ್ಲಿ ಬಲಿಷ್ಠ ಬೇರುಗಳನ್ನು ಹೊಂದಿರುವ ಬಿಜೆಪಿ ದಕ್ಷಿಣ ಭಾರತದಲ್ಲಿ ಮಾತ್ರ ಸಂಘಟನೆಯಲ್ಲಿ ಹಿಂದುಳಿದುಕೊಂಡಿದೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಬಿಜೆಪಿ ದಕ್ಷಿಣದಲ್ಲಿ ಹೆಚ್ಚು ಕೇಂದ್ರಿಕರಿಸಿ ಪಕ್ಷ ಸಂಘಟನೆ ಮಾಡುತ್ತಿದೆ. ಕರ್ನಾಟಕದ ಬಳಿಕ ಪಕ್ಷ ದಕ್ಷಿಣದಲ್ಲಿ ಪಕ್ಷ ಸಂಘಟನೆ ವಿಸ್ತರಣೆ ಮುಂದಾಗಿರುವ ಬಿಜೆಪಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಮೇಲೆ‌ ಗಮನವನ್ನು ತುಸು ಹೆಚ್ಚೆ ಕೇಂದ್ರಿಕರಿಸಿದೆ.

ತಮಿಳುನಾಡಿನಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದ್ದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಆಡಳಿತರೂಢ ಡಿಎಂಕೆಗೆ ತೊಡೆ ತಟ್ಟಿರುವ ಬಿಜೆಪಿ ರಾಜ್ಯದ 39 ಲೋಕಸಭಾ ಸ್ಥಾನಗಳ ಪೈಕಿ ಈ ಬಾರಿ ಬಿಜೆಪಿ 23ರಲ್ಲಿ ಸ್ಪರ್ಧಿಸಿದ್ದರೆ, ಅದರ ಮಿತ್ರ ಪಕ್ಷವಾದ ಪಟ್ಟಾಲಿ ಮಕ್ಕಳ್ ಕಚ್ಚಿ 10, ಮಾಜಿ ಸಚಿವ ಜಿಕೆ ವಾಸನ್ ನೇತೃತ್ವದ ತಮಿಳು ಮಣಿಲಾ ಕಾಂಗ್ರೆಸ್ 3, ಟಿಟಿವಿ ದಿನಕರನ್ ಅವರ ಎಎಂಎಂಕೆ 2 ಸೇರಿ ಎನ್‌ಡಿಎ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಎಲ್ಲ 39 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಬಿಜೆಪಿ ಮಾತ್ರ ಈ ಬಾರಿ ತಮಿಳುನಾಡಿನ ದಕ್ಷಿಣ ಚೆನ್ನೈ, ವೆಲ್ಲೂರು, ಪೆರಂಬಲೂರು, ಕೊಯಮತ್ತೂರು, ನೀಲಗಿರಿ, ವಿರುದುನಗರ ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಕಣ್ಣಿಟ್ಟಿದೆ. ಈ 6 ವಿಶೇಷ ಸ್ಥಾನಗಳ ಮೇಲೆ ಬಿಜೆಪಿ ಏಕೆ ಗಮನ ಹರಿಸುತ್ತಿದೆ ಎನ್ನುವುದು ವಿಶೇಷ ಸಂಗತಿಯಾಗಿದೆ.

ದಕ್ಷಿಣ ಚೆನ್ನೈನಲ್ಲಿ 1991 ರಿಂದ ದಕ್ಷಿಣ ಚೆನ್ನೈ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಈ ಬಾರಿ ತೆಲಂಗಾಣ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಜೆಪಿಯ ತಮಿಳಿಸೈ ಸುಂದರರಾಜನ್ ಅವರನ್ನು ಪಕ್ಷ ಕಣಕ್ಕಿಳಿಸಿದೆ. 2014 ರ ಚುನಾವಣೆಯು ದಕ್ಷಿಣ ಚೆನ್ನೈನಲ್ಲಿ 24.57 ಶೇಕಡಾ ಮತಗಳನ್ನು ಗಳಿಸುವ ಮೂಲಕ ಬಿಜೆಪಿ ಎರಡಂಕಿಯ ಗಡಿಯನ್ನು ದಾಟಿದ್ದು ಮೊದಲ ಬಾರಿಯಾಗಿದೆ, ಹೀಗಾಗೀ ಬಿಜೆಪಿ ಹೊಸ ಉತ್ಸಾಹದಲ್ಲಿದೆ.

ವೆಲ್ಲೂರ್‌ನಲ್ಲಿ 2009 ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ವೆಲ್ಲೂರಿನಿಂದ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿತ್ತು. 2009 ರಲ್ಲಿ 1.55% ಇದ್ದ ಮತ ಪ್ರಮಾಣ 2014 ರಲ್ಲಿ 33.26% ಏರಿದೆ. ಪೆರಂಬಲೂರ್‌ನಲ್ಲಿ 2014 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪೆರಂಬಲೂರು ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆ ಚುನಾವಣೆಯಲ್ಲಿ ಶೇ.23.2ರಷ್ಟು ಮತಗಳನ್ನು ಪಡೆದಿದ್ದರು.

ನೀಲಗಿರಿ ಕ್ಷೇತ್ರವು 1990 ರ ದಶಕದ ಅಂತ್ಯದಲ್ಲಿ ಬಿಜೆಪಿಯ ಭದ್ರಕೋಟೆಯಾಯಿತು. 1998 ರಲ್ಲಿ 46.49 ಶೇಕಡಾ ಮತಗಳನ್ನು ಮತ್ತು 1999 ರ ಲೋಕಸಭೆ ಚುನಾವಣೆಯಲ್ಲಿ 50.73 ಶೇಕಡಾ ಮತಗಳನ್ನು ಗಳಿಸಿತು. ಆದಾಗ್ಯೂ, ಈ ಎರಡು ವರ್ಷಗಳಲ್ಲಿ ಪಕ್ಷವು ಎಐಎಡಿಎಂಕೆ ಮತ್ತು ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿತ್ತು. ಈ ಬಾರಿ ಬಿಜೆಪಿಯ ಕೇಂದ್ರ ರಾಜ್ಯ ಸಚಿವ ಎಲ್ ಮುರುಗನ್ ಕಣಕ್ಕಿಳಿದಿದ್ದು ಬಿಜೆಪಿ ಕಾನ್ಫಿಡೆನ್ಸ್ ಹೆಚ್ಚಿಸಿದೆ.

ವಿರುದುನಗರದಲ್ಲಿ ನಟ ಮತ್ತು ರಾಜಕಾರಣಿ ಶರತ್‌ಕುಮಾರ್ ಅವರ ಪತ್ನಿ ರಾಧಿಕಾ ಶರತ್‌ಕುಮಾರ್ ಅವರು ತಮ್ಮ ಸಮತುವ ಮಕ್ಕಳ ಕಚ್ಚಿ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದಾರೆ ಮತ್ತು ವಿರುಧುನಗರದಿಂದ ಸ್ಪರ್ಧಿಸುತ್ತಿದ್ದಾರೆ. ಇಲ್ಲಿಂದ ಕಾಂಗ್ರೆಸ್ ಅಭ್ಯರ್ಥಿ ಬಿ.ಮಾಣಿಕ್ಕಂ ಟ್ಯಾಗೋರ್ ಮತ್ತು ಡಿಎಂಡಿಕೆ ನಾಯಕ ವಿಜಯಕಾಂತ್ ಪುತ್ರ ವಿಜಯ್ ಪ್ರಭಾಕರನ್ ಕೂಡ ಕಣದಲ್ಲಿದ್ದಾರೆ. ತಮ್ಮ ಅಭ್ಯರ್ಥಿ ರಾಧಿಕಾ ಶರತ್‌ಕುಮಾರ್ ಮೇಲೆ ಬಿಜೆಪಿ ಹೆಚ್ಚು ವಿಶ್ವಾಸ ಇರಿಸಿದೆ.

ಕೊಯಮತ್ತೂರು ಬಿಜೆಪಿಯ ಸಾಂಪ್ರದಾಯಿಕ ಕ್ಷೇತ್ರವೆಂದು ಪರಿಗಣಿಸಲಾಗಿದೆ. 1989 ರ ಚುನಾವಣೆಯಲ್ಲಿ ಬಿಜೆಪಿ 3.34 ಶೇಕಡಾ ಮತಗಳನ್ನು ಪಡೆದಿತ್ತು, 2019 ರ ವೇಳೆಗೆ 31.47 ಕ್ಕೆ ತಲುಪಿದೆ. ಕೊಯಮತ್ತೂರಿನಲ್ಲಿ ಡಿಎಂಕೆ ಮಾಜಿ ಮೇಯರ್ ಗಣಪತಿ ರಾಜ್‌ಕುಮಾರ್ ಅವರನ್ನು ಎಐಎಡಿಎಂಕೆಯ ಸಿಂಗೈ ಜಿ ರಾಮಚಂದ್ರನ್ ಕಣಕ್ಕಿಳಿಸಿದ್ರೆ ಬಿಜೆಪಿ ತನ್ನ ರಾಜ್ಯ ಅಧ್ಯಕ್ಷ ಫೈರ್ ಬ್ರ್ಯಾಂಡ್ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕಣಕ್ಕಿಳಿಸಿದ್ದು ಇದು ಬಿಜೆಪಿ ಭರವಸೆ ಹೆಚ್ಚಿಸಿದೆ.

ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಅಸಾಧ್ಯ ಎಂದು ಗೊತ್ತಿರುವ ಬಿಜೆಪಿ ಗೆಲ್ಲುವ ಕ್ಷೇತ್ರಗಳಿಗೆ ಹೆಚ್ಚು ಆದ್ಯತೆ ನೀಡಿ ಪ್ರಚಾರ ನಡೆಸುತ್ತಿದೆ. ಈ ವರ್ಷ ಪ್ರಧಾನಿ ಆರು ಬಾರಿ ತಮಿಳುನಾಡಿಗೆ ಭೇಟಿ ನೀಡಿದ್ದಾರೆ. ತನ್ನ ಚುನಾವಣಾ ಸಭೆಗಳಲ್ಲಿ, ಅವರು ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ವಿಷಯದ ಬಗ್ಗೆ ಆಡಳಿತಾರೂಢ ಡಿಎಂಕೆ ಮತ್ತು ಅದರ ಮಿತ್ರಪಕ್ಷ ಕಾಂಗ್ರೆಸ್ ಅನ್ನು ನಿರಂತರವಾಗಿ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿಯಲ್ಲದೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ನಿರಂತರವಾಗಿ ತಮಿಳುನಾಡಿಗೆ ಭೇಟಿ ನೀಡುತ್ತಿದ್ದಾರೆ. ತಮಿಳುನಾಡಿನಲ್ಲಿ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ, ತಮಿಳ್ ಮಣಿಲಾ ಕಾಂಗ್ರೆಸ್, ಪಟ್ಟಾಲಿ ಮಕ್ಕಳ್ ಕಚ್ಚಿ ಮುಂತಾದ ಪಕ್ಷಗಳು ಎನ್ ಡಿಎಗೆ ಸೇರ್ಪಡೆಗೊಂಡಿರುವುದು ಬಿಜೆಪಿಗೆ ಕರ್ನಾಟಕದ ಬಳಿಕ ತಮಿಳುನಾಡಿನಲ್ಲಿ ಅಸ್ತಿತ್ವ ಸಾಧಿಸುವ ಕನಸ್ಸಿಗೆ ಹೆಚ್ಚು ಬಲ ಬಂದತಾಗಿದೆ.

Previous Post
ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ತಕ್ಷಣ ಜಾತಿ ಗಣತಿ: ರಾಹುಲ್ ಗಾಂಧಿ
Next Post
ಅರವಿಂದ್ ಕೇಜ್ರಿವಾಲ್ ನೇರ ಭೇಟಿಗೆ ಪತ್ನಿ ಸುನೀತಾಗೆ ಅನುಮತಿ ನಿರಾಕರಿಸಿದೆ ತಿಹಾರ್ ಜೈಲು ಅಧಿಕಾರಿಗಳ ವಿರುದ್ಧ ಆಪ್ ಆರೋಪ

Recent News