ದೇಶದ ಮೊದಲ ನದಿಯೊಳಗಿನ ಮೆಟ್ರೋ ಸುರಂಗ ಮಾರ್ಗ ಲೋಕಾರ್ಪಣೆ

ದೇಶದ ಮೊದಲ ನದಿಯೊಳಗಿನ ಮೆಟ್ರೋ ಸುರಂಗ ಮಾರ್ಗ ಲೋಕಾರ್ಪಣೆ

ಕೋಲ್ಕತ್ತಾ: ಭಾರತದ ಮೊದಲ ನದಿಯೊಳಗಿನ ಮೆಟ್ರೋ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಕೋಲ್ಕತ್ತಾ ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್‌ನ ಹೌರಾ ಮೈದಾನ-ಎಸ್‌ಪ್ಲೇನೇಡ್‌ವರೆಗಿನ ಮಾರ್ಗವನ್ನು ಉದ್ಘಾಟಿಸಿದ ಮೋದಿ ಮಕ್ಕಳದೊಂದಿಗೆ ಮೆಟ್ರೋದಲ್ಲಿ ಸಂಚಾರ ಮಾಡಿದರು. ಈ ಕಾರ್ಯಕ್ರಮದಲ್ಲಿ ಮೋದಿ ದೇಶದ ವಿವಿಧ ಭಾಗಗಳಲ್ಲಿ ಒಟ್ಟು 15,400 ಕೋಟಿ ರೂ. ಮೊತ್ತದಲ್ಲಿ ನಿರ್ಮಾಣವಾಗಲಿರುವ ವಿವಿಧ ಮೂಲಸೌಕರ್ಯ ಕಾಮಗಾರಿಗೆ ಚಾಲನೆ ನೀಡಿದರು.

ಕೋಲ್ಕತಾ ಹಾಗೂ ಹೌರಾ ನಗರವನ್ನು ಸಂಪರ್ಕಿಸುವ ಈ ಮೆಟ್ರೋ ರೈಲು ಪಶ್ಚಿಮ ಬಂಗಾಳದ ಜೀವನಾಡಿ ಎಂದೇ ಗುರುತಿಸಿಕೊಂಡಿದೆ. ಹೂಗ್ಲಿ ನದಿಯು ಕೋಲ್ಕತ್ತಾ ಮತ್ತು ಹೌರಾ ಅವಳಿ ನಗರಗಳನ್ನು ಕ್ರಮವಾಗಿ ಪೂರ್ವ ಮತ್ತು ಪಶ್ಚಿಮ ದಂಡೆಗಳಲ್ಲಿ ಪ್ರತ್ಯೇಕಿಸುತ್ತದೆ. ಈ ಎರಡು ನಗರಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ರೈಲು ಹೂಗ್ಲಿ ನದಿಯ ನೀರಿನೊಳಗಿನಿಂದ ಸಾಗಲಿದೆ.

ಈ ರೈಲು ಮಾರ್ಗ 16.6 ಕಿಲೋಮೀಟರ್ ಉದ್ದವನ್ನು ಹೊಂದಿದ್ದು 6 ನಿಲ್ದಾಣಗಳನ್ನು ಇರಲಿದೆ. 6 ನಿಲ್ದಾಣಗಳ ಪೈಕಿ 3 ನಿಲ್ದಾಣಗಳು ನೀರಿನ ಅಡಿಯಲ್ಲಿ ಮತ್ತು 3 ನಿಲ್ದಾಣಗಳು ನೆಲದ ಮೇಲೆ ನಿರ್ಮಾಣವಾಗಿದೆ. 4,965 ಕೋಟಿ ರೂ. ವೆಚ್ಚದಲ್ಲಿ 4.8 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣಗೊಂಡಿದೆ. ನೆಲಮಟ್ಟದಿಂದ 30 ಮೀಟರ್ ಅಡಿಯಲ್ಲಿ ನಿಲ್ದಾಣ ನಿರ್ಮಾಣವಾಗುವ ಮೂಲಕ ಹೌರಾವು ಭಾರತದ ಆಳವಾದ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕೋಲ್ಕತ್ತಾ ಪೂರ್ವ-ಪಶ್ಚಿಮ ಮೆಟ್ರೋ ಕಾರಿಡಾರ್ ಯೋಜನೆಗೆ ಅಡಿಪಾಯವನ್ನು ಫೆಬ್ರವರಿ 2009 ರಲ್ಲೇ ಹಾಕಲಾಗಿತ್ತು. ಆದರೆ ನೀರೊಳಗಿನ ಮೆಟ್ರೋ ಸುರಂಗದ ನಿರ್ಮಾಣ ಕಾರ್ಯ 2017 ರಲ್ಲಿ ಆರಂಭವಾಗಿತ್ತು.

Previous Post
ಅಮೇಥಿಯಿಂದ ರಾಹುಲ್‌ ಗಾಂಧಿ, ರಾಯ್‌ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ?
Next Post
ಮಾರ್ಚ್‌ 9ಕ್ಕೆ ‘ರೈತ ಸೌರ ಶಕ್ತಿ ಮೇಳ’: ಸಿಎಂ ಸಿದ್ದರಾಮಯ್ಯ ಚಾಲನೆ

Recent News