ಧರ್ಮವನ್ನು ಆಯುಧವನ್ನಾಗಿ ಬಳಸುತ್ತಿರುವ ಬಿಜೆಪಿ: ಪರಕಾಲ ಪ್ರಭಾಕರ್

ಧರ್ಮವನ್ನು ಆಯುಧವನ್ನಾಗಿ ಬಳಸುತ್ತಿರುವ ಬಿಜೆಪಿ: ಪರಕಾಲ ಪ್ರಭಾಕರ್

ಕೋಲ್ಕತ್ತಾ, ಮೇ 3: ಬಿಜೆಪಿ ಆಡಳಿತದ ನವ ಭಾರತದಲ್ಲಿ ರಾಜಕೀಯ ಉದ್ದೇಶಗಳಿಗಾಗಿ ಧರ್ಮವನ್ನು ಆಯುಧವನ್ನಾಗಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪತಿ ಹಾಗೂ ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಪರಕಾಲ ಪ್ರಭಾಕರ್, ಒಕ್ಕೂಟ ವ್ಯವಸ್ಥೆಯನ್ನು ನಾಶಪಡಿಸುವ ಪ್ರಯತ್ನಗಳು ನಡೆದಿವೆ. ದೇಶದಲ್ಲಿ ಧರ್ಮವು ಯಾವಾಗಲೂ ಇತ್ತು. ಆದರೆ, ಬಿಜೆಪಿ ಆಡಳಿತದ ಈ ‘ನವ ಭಾರತ’ದಲ್ಲಿ ಹೊಸ ವಿಷಯವೆಂದರೆ ರಾಜಕೀಯ ಉದ್ದೇಶಗಳು ಮತ್ತು ಹಿತಾಸಕ್ತಿಗಳಿಗಾಗಿ ಧರ್ಮವನ್ನು ಆಯುಧವನ್ನಾಗಿಸಲಾಗಿದೆ ಎಂದು ಹೇಳಿದ್ದಾರೆ.

ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯು ಅಪಾಯದಲ್ಲಿದೆ. ಕೇಂದ್ರ ಸರ್ಕಾರವು ಟೀಕೆಗಳನ್ನು ಸ್ವೀಕರಿಸುವುದಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದೆ ಇರುವವರು ತಮ್ಮನ್ನು ತಾವು ಸ್ವಾತಂತ್ರ್ಯ ಹೋರಾಟಗಾರರೆಂದು ಕರೆದುಕೊಳ್ಳುತ್ತಿದ್ದಾರೆ. ಇದು ನಾಚಿಗೇಡಿನ ಸಂಗತಿ. ನವಭಾರತದಲ್ಲಿ ಅಸಮಾನತೆ ತಾಂಡವವಾಡುತ್ತಿದೆ. ಆರ್ಥಿಕವಾಗಿ ಸಶಕ್ತರಾಗಿರುವ ಶೇಕಡ ಒಂದರಷ್ಟು ಜನರು ರಾಷ್ಟ್ರದ ಶೇ.40ರಷ್ಟು ಸಂ‍ಪನ್ಮೂಲವನ್ನು ಹೊಂದಿದ್ದಾರೆ ಎಂದು ಪರಕಾಲ ಪ್ರಭಾಕರ್ ಹೇಳಿದ್ದಾರೆ.

ಮೋದಿ ನೇತೃತ್ವದ ಪ್ರಸ್ತುತ ಬಿಜೆಪಿ ಸರಕಾರದ ಪ್ರಬಲ ಟೀಕಾಕಾರಾಗಿರುವ ಪರಕಾಲ ಪ್ರಭಾಕರ್ ಅವರು ಒರ್ವ ಭಾರತೀಯ ರಾಜಕೀಯ ಅರ್ಥಶಾಸ್ತ್ರಜ್ಞ ಮತ್ತು ಸಾಮಾಜಿಕ ವಿಮರ್ಶಕರಾಗಿದ್ದಾರೆ. ಇವರು ಲಂಡನ್‌ ಸ್ಕೂಲ್‌ ಆಪ್‌ ಎಕನಾಮಿಕ್‌ನಿಂದ ಪಿಹೆಚ್‌ಡಿ ಪಡೆದಿದ್ದರು. ಜುಲೈ 2014 ಮತ್ತು ಜೂನ್ 2018ರ ನಡುವೆ ಸಂವಹನ ಸಲಹೆಗಾರರಾಗಿ ಆಂಧ್ರ ಪ್ರದೇಶ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸ್ಥಾನವನ್ನು ಹೊಂದಿದ್ದರು.

ನೋಟು ರದ್ದತಿಯನ್ನು ಒಂದು ದೊಡ್ಡ ಪ್ರಮಾದ ಎಂದು ಕರೆದಿದ್ದ ಪರಕಾಲ ಪ್ರಭಾಕರ್, ಅರ್ಥಶಾಸ್ತ್ರದಲ್ಲಿ ಮೂಲಭೂತ ತರಬೇತಿ ಹೊಂದಿರುವ ಯಾವುದೇ ಅರ್ಥಶಾಸ್ತ್ರಜ್ಞರು, ಇಷ್ಟು ದೊಡ್ಡ ಪ್ರಮಾಣದಲ್ಲಿ ನೋಟು ಅಮಾನೀಕರಣವನ್ನು ಶಿಫಾರಸು ಮಾಡುತ್ತಿರಲಿಲ್ಲ ಎಂದು ಹೇಳಿದ್ದರು. ಸ್ವಾತಂತ್ರ್ಯ ಹಾಗೂ ಸಂವಿಧಾನ ರೂಪಿಸಿದ ಆಶಯಗಳಿಗೆ ವಿರುದ್ಧವಾಗಿ ದೇಶ ಸಾಗುತ್ತಿದೆ. ಜನರು ಭ್ರಮೆಗಳನ್ನೇ ವಾಸ್ತವವೆಂದು ನಂಬಿಕೊಂಡು ಸಂಭ್ರಮಿಸುತ್ತಿದ್ದಾರೆ. ಕೇಂದ್ರದ ಯೋಜನೆಗಳ ಶೇ 80ರಷ್ಟು ಹಣವನ್ನು ಪ್ರಚಾರಕ್ಕೆ ಬಳಸಲಾಗುತ್ತಿದೆ. ಪ್ರಶ್ನಿಸಿದವರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಅವರು ಹೇಳಿದ್ದರು.

Previous Post
ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್‌: ನಿರಾಶೆ ವ್ಯಕ್ತಪಡಿಸಿದ ಕುಸ್ತಿಪಟುಗಳು
Next Post
ಬಾಲಕನ ಕತ್ತು ಸೀಳಿದ ಕಾಳಿದೇವಿ ಪಾತ್ರಧಾರಿ

Recent News