ನರೇಂದ್ರ ಮೋದಿಯವರು ಒಬ್ಬ ಒಳ್ಳೆಯ ನಾಟಕಕಾರ, ಇವೆಂಟ್ ಮ್ಯಾನೇಜರ್ ಅಷ್ಟೇ: ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ

ನರೇಂದ್ರ ಮೋದಿಯವರು ಒಬ್ಬ ಒಳ್ಳೆಯ ನಾಟಕಕಾರ, ಇವೆಂಟ್ ಮ್ಯಾನೇಜರ್ ಅಷ್ಟೇ: ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ

ಉತ್ತರಕನ್ನಡ ಲೋಕಸಭಾ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ. ಹೊಸ ಬದಲಾವಣೆಗೆ ಉತ್ತಮ ಅವಕಾಶ ಒದಗಿದೆ: ಸಿ.ಎಂ.ಸಿದ್ದರಾಮಯ್ಯ

ಕುಮುಟಾ, ಮೇ 03: ನರೇಂದ್ರ ಮೋದಿ ಒಬ್ಬ ಒಳ್ಳೆಯ ನಾಟಕಕಾರ. ಇವೆಂಟ್ ಮ್ಯಾನೇಜರ್ ಆಗಿದ್ದಾರೆ. ಉತ್ತರಕನ್ನಡ ಲೋಕಸಭಾ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ. ಹೊಸ ಬದಲಾವಣೆಗೆ ಉತ್ತಮ ಅವಕಾಶ ಒದಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.

ಇಂದು ಕುಮುಟಾದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರ ಪರವಾಗಿ ಮತದಾರರಲ್ಲಿ ಮತ ಯಾಚಿಸಿ ಮಾತನಾಡಿದರು.

ಪ್ರಧಾನಿ ಕುರ್ಚಿಯಲ್ಲಿ ಉಳಿಯಲು ಯೋಗ್ಯತೆ ಇಲ್ಲ

ಬಿಜೆಪಿ ಮಹಿಳೆಯರಿಗೆ ರಕ್ಷಣೆ ಕೊಡುತ್ತದೆ ಎಂದು ಹೇಳುವ ಮೋದಿಯವರ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಏನು ಮಾಡಿದ್ದಾರೆ ಎಂದು ಜಗಜ್ಜಾಹೀರಾಗಿದೆ. ಇದು ತಿಳಿದಿದ್ದರೂ ಕೂಡ ಹೊಂದಾಣಿಕೆ ಮಾಡಿಕೊಂಡು ಅತ್ಯಾಚಾರ ಮಾಡಿರುವ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ಕೊಟ್ಟಿದ್ದೀರಲ್ಲಾ? ಇದೇನಾ ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡುವ ರೀತಿ ? ಅತ್ಯಾಚಾರಿಗಳಿಗೆ ರಕ್ಷಣೆ ಕೊಟ್ಟು, ಹೆಣ್ಣು ಮಕ್ಕಳಿಗೆ ಏನು ಸಂದೇಶ ನೀಡಿದ್ದೀರಿ ಎಂದು ಇಡೀ ರಾಜ್ಯದ ಜನ ಕೇಳುತ್ತಿದ್ದಾರೆ ಎಂದರು.

ಮೋದಿ ಬರೀ ಸುಳ್ಳು ಹೇಳುತ್ತಾರೆ. ಯಾವ ಭರವಸೆಗಳನ್ನು ಈಡೇರಿಸುವ ಪ್ರಯತ್ನ ಮಾಡಿಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲದ ಮೇಲೆ ಅವರು ಪ್ರಧಾನಿ ಕುರ್ಚಿಯಲ್ಲಿ ಉಳಿಯಲು ಯೋಗ್ಯತೆ ಇಲ್ಲ ಎನ್ನಬೇಕಾಗುತ್ತದೆ ಎಂದರು.

ಬಾರಿ ಬದಲಾವಣೆ ತೆರೆಯಲು ನಿಮಗೆ ಅವಕಾಶ ದೊರೆತಿದೆ .

ಹತ್ತು ವರ್ಷಗಳ ಕಾಲ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಬಡವರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಲಿಲ್ಲ. ಅವರ ಕಷ್ಟ ಸುಖ ಏನೆಂದು ಕೇಳಲಿಲ್ಲ. ಕರ್ನಾಟಕದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೆ ಡಬಲ್ ಇಂಜಿನ್ ಸರ್ಕಾರವಾಗುತ್ತದೆ ಎಂದಿದ್ದರು. ಬಿಜೆಪಿ ಸರ್ಕಾರ 3 ವರ್ಷ ಹತ್ತು ತಿಂಗಳು ಲೂಟಿ ಮಾಡಿದ್ದು ಬಿಟ್ಟರೆ ಬಡವರು, ರೈತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿ ಏನೂ ಕೆಲಸ ಮಾಡಲಿಲ್ಲ ಎಂದರು.

ನಮ್ಮ ಪಕ್ಷದ ಅಭ್ಯರ್ಥಿಗೆ ಈ ಬಾರಿ ಜನತೆ ಆಶೀರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಹಿಂದೆಲ್ಲಾ ಈ ಕ್ಷೇತ್ರದಿಂದ ಬಿಜೆಪಿಯನ್ನು ಗೆಲ್ಲಿಸಿದ್ದೀರಿ. ಒಮ್ಮೆ ಮಾರ್ಗರೇಟ್ ಆಳ್ವ ಅವರು ಸಂಸದರಾಗಿದ್ದರು. ಈ ಬಾರಿ ಬದಲಾವಣೆ ತೆರೆಯಲು ನಿಮಗೆ ಒಳ್ಳೆಯ ಅವಕಾಶ ದೊರೆತಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಬದಲಾವಣೆಗೆ ಕಾರಣರಾಗಿ ಎಂದರು.

40% ಸರ್ಕಾರದ ಆರೋಪಕ್ಕೆ ಮೋದಿ ಪ್ರತಿಕ್ರಿಯೆ ನೀಡಲಿಲ್ಲ

ಕರ್ನಾಟಕದಲ್ಲಿ ಲೂಟಿ ಹೊಡೆಯುವ ಗ್ಯಾಂಗ್ ಇದೆ ಎಂದು ನರೇಂದ್ರ ಮೋದಿ ಹೇಳುತ್ತಾರೆ . ಬಿಜೆಪಿ ಸರ್ಕಾರವನ್ನು ಗುತ್ತಿಗೆದಾರರ ಸಂಘ 40% ಸರ್ಕಾರ ಎಂದು ಆರೋಪಿಸಿದಾಗ ಮೋದಿಯವರು ಪ್ರತಿಕ್ರಿಯೆ ನೀಡಲಿಲ್ಲ. 40% ಸರ್ಕಾರ ಎಂದು ಜನ ಹೇಳುವಾಗಲೂ ಸುಮ್ಮನೆ ಸಹಿಸಿಕೊಂಡು ಇದ್ದಿರಿ. ಅದರ ಅರ್ಥ ಭ್ರಷ್ಟಾಚಾರವನ್ನು ಸಹಿಸಿಕೊಂಡಿರಿ. ಭ್ರಷ್ಟರನ್ನು ಸರ್ಕಾರಕ್ಕೆ ಸೇರ್ಪಡೆ ಗೊಳಿಸುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.‌

ಬಡವರ ಬದುಕು ದುಸ್ತರ ಮಾಡಿದರು

ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದರು. ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡುವುದಾಗಿ ಹೇಳಿದರು, ಯಾವುದೂ ಕಡಿಮೆ ಆಗಲಿಲ್ಲ. ರೈತರ , ಬಡವರ ಜೀವನ ಅತ್ಯಂತ ಸುಲಭ ಮಾಡುತ್ತೇನೆ ಎಂದರು. ಇಲ್ಲಿಯವರೆಗೆ ಅದನ್ನು ಮಾಡಲಿಲ್ಲ ಎಂದರು. ಜನರನ್ನು ಭ್ರಮಾಲೋಕದಲ್ಲಿ ತೇಲಾಡುವಂತೆ ಮಾಡಿ ದೇಶದಲ್ಲಿ ಯಾವ ಭರವಸೆಯನ್ನೂ ಈಡೇರಿಸಲಿಲ್ಲ. ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪ ಮಾಡಿ, ಭಾವನೆಗಳನ್ನು ಕೆರಳಿಸಿದರು. ಜನರ ಕಷ್ಟಗಳಿಗೆ ಪರಿಹಾರ ಕೊಡಲಿಲ್ಲ. ಹಾಗಾಗಿ ಬಡವರ ಬದುಕು ದುಸ್ತರವಾಯಿತು.

ಸುಳ್ಳು ಹೇಳಿ ಕಾಂಗ್ರೆಸ್ ಎಂದೂ ಮತ ಕೇಳುವುದಿಲ್ಲ

ರಾಜ್ಯದಲ್ಲಿ ಜನರ ಜೀವನ ಸುಧಾರಣೆ ಮಾಡುವ ಸಲುವಾಗಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಲಾಯಿತು. ಶಕ್ತಿ ಯೋಜನೆಯಡಿ 200 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನ ಪ್ರಶಂಸಿದ್ದಾರೆ. ರಾಜ್ಯದ ಜನರಿಗೆ ಅಕ್ಕಿ ಪೂರೈಸಲು ಕೇಂದ್ರ ಒಪ್ಪದೇ, ರಾಜ್ಯದ ಬಡವರಿಗೆ ಅನ್ಯಾಯ ಮಾಡಿದರು. ಆದ್ದರಿಂದ ರಾಜ್ಯ ಸರ್ಕಾರ 5 ಕೆಜಿ ಅಕ್ಕಿಯ ಬದಲು 170 ರೂ. ನೀಡುತ್ತಿದೆ. 1.60 ಕೋಟಿ ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆಯಿಂದ ಲಾಭವಾಗಿದೆ. 1.20 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಲಾಗಿದೆ. ನಿರುದ್ಯೋಗಿ ಯುವಜನತೆಗೆ ಯುವನಿಧಿ ಯೋಜನೆಯನ್ನು ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಸುಳ್ಳು ಹೇಳಿ ಮತ ಕೇಳುವ ಕೆಲಸವನ್ನು ಕಾಂಗ್ರೆಸ್ ಎಂದೂ ಮಾಡಿಲ್ಲ. ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಾಗಿ ಜನರಿಗೆ ಕರೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ರಾಜ್ಯಪಾಲರಾದ ಶ್ರೀಮತಿ ಮಾರ್ಗರೇಟ್ ಆಳ್ವಾ, ಮಾಜಿ ಸಚಿವ ಆರ್. ವಿ . ದೇಶಪಾಂಡೆ, ಸಚಿವ ಮಾಂಕಾಳ ವೈದ್ಯ, ರಮಾನಾಥ್ ರೈ, ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಶಾಸಕ ಭೀಮಣ್ಣ ನಾಯಕ್, ಸತೀಶ್ , ಮಾಜಿ ಶಾಸಕರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Previous Post
“ಹೆದರಬೇಡಿ, ಹೆದರಿ ಓಡಬೇಡಿ” ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ ಮೋದಿ
Next Post
ಉತ್ತರಕನ್ನಡ ಜಿಲ್ಲೆಯ ಜನ ರಾಜಕೀಯವಾಗಿ ಪ್ರಜ್ಞಾವಂತರು: ನುಡಿದಂತೆ ನಡೆಯುವವರನ್ನು ಗುರುತಿಸುವ ಪ್ರಜ್ಞಾವಂತಿಕೆ ಇವರಿಗಿದೆ: ಸಿ.ಎಂ.ಸಿದ್ದರಾಮಯ್ಯ ಮೆಚ್ಚುಗೆ

Recent News