“ಪ್ರತಿ ಕ್ಷಣವೂ ದೇಶಕ್ಕಾಗಿ, 24X7 ಫಾರ್ 2047” ಬಿಜೆಪಿ ‘ಸಂಕಲ್ಪ ಪತ್ರ’ ಬಿಡುಗಡೆ ಮಾಡಿದ ಪ್ರಧಾನಿ ಮೋದಿ ಯುಸಿಸಿ, ಒಂದು ದೇಶ ಒಂದು ಚುನಾವಣೆ ಭರವಸೆ

“ಪ್ರತಿ ಕ್ಷಣವೂ ದೇಶಕ್ಕಾಗಿ, 24X7 ಫಾರ್ 2047” ಬಿಜೆಪಿ ‘ಸಂಕಲ್ಪ ಪತ್ರ’ ಬಿಡುಗಡೆ ಮಾಡಿದ ಪ್ರಧಾನಿ ಮೋದಿ ಯುಸಿಸಿ, ಒಂದು ದೇಶ ಒಂದು ಚುನಾವಣೆ ಭರವಸೆ

ನವದೆಹಲಿ: ಲೋಕಸಭಾ ಚುನಾವಣೆಗೆ ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ರಾಜನಾಥ್ ಸಿಂಗ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಪ್ರಣಾಳಿಕೆ ಬಿಡುಗಡೆ ಮಾಡಿದರು.

ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸಮಾರಂಭ ಆಯೋಜಿಸಲಾಗಿತ್ತು. ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ಜಯಂತಿ ದಿನದಂದೇ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿತು. ಇದಕ್ಕೂ ಮುನ್ನ ಅಂಬೇಡ್ಕರ್‌ ಅವರ ಪುತ್ಥಳಿಗೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪುಷ್ಪನಮನ ಸಲ್ಲಿಸಿದರು.

“ಪ್ರತಿ ಕ್ಷಣವೂ ದೇಶಕ್ಕಾಗಿ, 24*7 For 2047” ಚುನಾವಣಾ ಘೋಷವಾಕ್ಯದೊಂದಿಗೆ ಬಿಜೆಪಿ ಇಂದು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿತು. ಇದೇ ವೇಳೆ ಪ್ರಧಾನಿ ಮೋದಿ ಅವರ 10 ವರ್ಷಗಳ ಸಾಧನೆ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು. ಬಹುನಿರೀಕ್ಷಿತ ಪ್ರಣಾಳಿಕೆಯಲ್ಲಿ ಬಡವರು, ಮಹಿಳೆಯರು, ರೈತರು, ಹಿಂದುಳಿದ ವರ್ಗದ ಜನರ ಅಭಿವೃದ್ಧಿ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.

70 ವರ್ಷ ಮೇಲ್ಪಟ್ಟ ಎಲ್ಲರನ್ನೂ ಹಾಗೂ ತೃತೀಯಲಿಂಗಿಗಳನ್ನು ಆಯುಷ್ಮಾನ್ ಭಾರತ್‌ ವ್ಯಾಪ್ತಿಗೆ ಸೇರ್ಪಡೆ ಮಾಡುವ ಭರವಸೆಯನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದೆ. ಆ ಮೂಲಕ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ಸೌಲಭ್ಯ ಒದಗಿಸಲಾಗುವುದು. ಅಲ್ಲದೇ, 3 ಕೋಟಿ ಮನೆ ನಿರ್ಮಾಣ, ಪೈಪ್ ಮೂಲಕ ಮನೆಗೆ ಅಡುಗೆ ಅನಿಲ, 3 ಕೋಟಿ ಗ್ರಾಮೀಣ ಮಹಿಳೆಯರು ‘ಲಖ್ ಪತಿ ದೀದಿ’ ಯೋಜನೆ ಫಲಾನುಭವಿಗಳಾಗಲಿದ್ದಾರೆಂಬ ಭರವಸೆಯನ್ನು ಪ್ರಣಾಳಿಕೆ ನೀಡಿದೆ. ಗರ್ಭಕಂಠ ಕ್ಯಾನ್ಸರ್ ತಡೆಗೆ ವಿಶೇಷ ಯೋಜನೆ, ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ತಡೆಯಲು ಕಠಿಣ ಕಾನೂನು, ಹಿರಿಯ ನಾಗರಿಕರಿಗೆ ಜ್ಞಾನ ಹಂಚಿಕೆ ಪೋರ್ಟಲ್ ಹಾಗೂ ಬಡವರಿಗೆ ಉಚಿತ ಪಡಿತರ, ನೀರು ಮತ್ತು ಗ್ಯಾಸ್ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದೆ.

ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದು, ಅಂಚೆ‌ ಮತ್ತು ಡಿಜಿಟಲ್‌ ನೆಟ್ವರ್ಕ್ ಸಹಯೋಗ, ಹಿರಿಯ ನಾಗರಿಕರಿಗೆ ಯುಪಿಐ ಬಗ್ಗೆ ತರಬೇತಿ – ಮೋಸ ವಂಚನೆಗಳಿಂದ ತಪ್ಪಿಸಲು ಕ್ರಮಕೈಗೊಳ್ಳುವುದು, ಹಿರಿಯ ನಾಗರಿಕರಿಗೆ ಆಯುಷ್ ಕ್ಯಾಂಪ್‌ ಆಯೋಜನೆ, ರಾಜ್ಯ ಸರ್ಕಾರಗಳ ಜೊತೆ ಸೇರಿ ಹಿರಿಯ ನಾಗರಿಕರಿಗೆ ಸುಗಮ ತೀರ್ಥಯಾತ್ರೆ ವ್ಯವಸ್ಥೆ, ಕಾಲಕ್ಕೆ ತಕ್ಕಂತೆ ಎಂಎಸ್‌ಪಿ ಜಾರಿ, ಭಾರತವನ್ನು ಅಂತಾರಾಷ್ಟ್ರೀಯ ನ್ಯೂಟ್ರಿ ಹಬ್ ಮಾಡುವುದು, ಕೃಷಿಗಾಗಿ ಪ್ರತ್ಯೇಕ ಸ್ಯಾಟಲೈಟ್ ಮೊದಲಾದ ಭರವಸೆಗಳನ್ನು ಬಿಜೆಪಿ ಜನರಿಗೆ ನೀಡಿದೆ.

ಒಂದು ರಾಷ್ಟ್ರ, ಒಂದು ಚುನಾವಣೆ ಮತ್ತು ಸಾಮಾನ್ಯ ಮತದಾರರ ಪಟ್ಟಿಯನ್ನು ತರುವುದು, ಏಕರೂಪ ನಾಗರಿಕ ಸಂಹಿತೆ ಜಾರಿ, ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ ಶೂನ್ಯ ವಿದ್ಯುತ್ ಬಿಲ್, ಮಹಿಳೆಯರಿಗಾಗಿ ಶೌಚಾಲಯಗಳ ಸಂಖ್ಯೆ ಹೆಚ್ಚಳ ಮತ್ತು ಮಹಿಳಾ ಶಕ್ತಿ ವಂದನ್ ಕಾಯ್ದೆಯ ಅನುಷ್ಠಾನ, ವಂದೇ ಭಾರತ್ ರೈಲು ಜಾಲದ ವಿಸ್ತರಣೆ, ಅಮೃತ್ ಭಾರತ್ ಮತ್ತು ನಮೋ ಭಾರತ್ ರೈಲುಗಳು ಬರಲಿವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ಹೊಸ ವಿಮಾನ ನಿಲ್ದಾಣ, ಹೆದ್ದಾರಿಗಳು, ಮೆಟ್ರೋ ಮತ್ತು ನೀರಿನ ಮೆಟ್ರೋಗಳು ಬರಲಿವೆ. ಹೆದ್ದಾರಿಗಳಲ್ಲಿ ಟ್ರಕ್ ಚಾಲಕರಿಗೆ ಆಧುನಿಕ ಸೌಲಭ್ಯಗಳು, ವಿಶ್ವಾದ್ಯಂತ ರಾಮಾಯಣ ಉತ್ಸವ ಆಚರಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

Previous Post
2024ರ ಲೋಕಸಭಾ ಚುನಾವಣೆ ಏಕೆ-ಯಾರಿಗೆ ನಿರ್ಣಾಯಕ?
Next Post
ಬಿಜೆಪಿ ಪ್ರಣಾಳಿಕೆ ಪ್ರಮುಖ ಅಂಶಗಳು

Recent News