ಬಾಂಗ್ಲಾ ಬಿಕ್ಕಟ್ಟು: ಸರ್ವಪಕ್ಷ ಸಭೆ ನಡೆಸಿದ ಕೇಂದ್ರ ಸರ್ಕಾರ

ಬಾಂಗ್ಲಾ ಬಿಕ್ಕಟ್ಟು: ಸರ್ವಪಕ್ಷ ಸಭೆ ನಡೆಸಿದ ಕೇಂದ್ರ ಸರ್ಕಾರ

ನವದೆಹಲಿ, ಆ. 6: ಬಾಂಗ್ಲಾದೇಶದಲ್ಲಿ ಉಂಟಾಗಿರುವ ಅರಾಜಕತೆ, ಪ್ರಕ್ಷುಬ್ದ ವಾತಾವರಣದ ಬಗ್ಗೆ ವಿವರಿಸಲು ಭಾರತೀಯ ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಮಂಗಳವಾರ ಸರ್ವಪಕ್ಷಗಳ ಸಭೆ ನಡೆಸಿದ್ದಾರೆ. ಈ ವೇಳೆ ಸಭೆಗೆ ಒಮ್ಮತದ ಬೆಂಬಲ ವ್ಯಕ್ತಪಡಿಸಿದ ಎಲ್ಲಾ ಪಕ್ಷಗಳ ಮುಖಂಡರನ್ನು ಅವರು ಶ್ಲಾಘಿಸಿದ್ದಾರೆ. ಸಭೆಯ ಬಳಿಕ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಜೈಶಂಕರ್ “ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಇಂದು ಸಂಸತ್ತಿನಲ್ಲಿ ಸರ್ವಪಕ್ಷ ಸಭೆ ಕರೆದು ಸಂಕ್ಷಿಪ್ತವಾಗಿ ವಿವರಿಸಲಾಯಿತು. ಸಭೆಗೆ ಒಮ್ಮತದ ಬೆಂಬಲ ವ್ಯಕ್ತಪಡಿಸಿದನ್ನು ಶ್ಲಾಘಿಸುತ್ತೇನೆ” ಎಂದಿದ್ದಾರೆ. ಕೇಂದ್ರ ಸರ್ಕಾರ ಬಾಂಗ್ಲಾದೇಶದ ಸೇನೆಯೊಂದಿಗೂ ಸಂಪರ್ಕದಲ್ಲಿದೆ. ಸರ್ಕಾರ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಭೆಯಲ್ಲಿ ಸಚಿವ ಜೈಶಂಕರ್ ಸರ್ವ ಪಕ್ಷಗಳ ನಾಯಕರಿಗೆ ತಿಳಿಸಿದ್ದಾರೆ.  ಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಆರೋಗ್ಯ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಉಪಸ್ಥಿತರಿದ್ದರು. “ಬಾಂಗ್ಲಾದೇಶದ ಪರಿಸ್ಥಿತಿಗೆ ಸಂಬಂಧಿಸಿದಂತೆ ಭಾರತದ ದೀರ್ಘಾವಧಿ ಮತ್ತು ಅಲ್ಪಾವಧಿಯ ಕಾರ್ಯತಂತ್ರಗಳ ಬಗ್ಗೆ ರಾಹುಲ್ ಗಾಂಧಿ ಸಭೆಯಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸರ್ಕಾರ, “ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆ. ಈ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ” ಎಂದು ಪ್ರತಿಕ್ರಿಯಿಸಿದೆ. ಬಾಂಗ್ಲಾ ಬಿಕ್ಕಟ್ಟಿನ ಹಿಂದೆ ವಿದೇಶಿ ಕೈಗಳ ಸಂಭಾವ್ಯ ಒಳಗೊಳ್ಳುವಿಕೆ ಇರುವ ಬಗ್ಗೆ ರಾಹುಲ್ ಗಾಂಧಿ ಸರ್ಕಾರವನ್ನು ಪ್ರಶ್ನಿಸಿದ್ದು, “ಇದಕ್ಕೆ ಉತ್ತರಿಸಿದ ಸರ್ಕಾರ, ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲಾಗುತ್ತಿದೆ” ಎಂದು ಹೇಳಿರುವುದಾಗಿ ವರದಿಯಾಗಿದೆ. ಸಭೆಯಲ್ಲಿ, ಬಾಂಗ್ಲಾದೇಶದಲ್ಲಿ ಸುಮಾರು 20,000 ಭಾರತೀಯ ಪ್ರಜೆಗಳಿದ್ದಾರೆ ಎಂದು ಸರ್ಕಾರ ಸರ್ವಪಕ್ಷಗಳ ನಾಯಕರಿಗೆ ತಿಳಿಸಿದೆ. ಎಎನ್‌ಐ ವರದಿ ಪ್ರಕಾರ, ಇದುವರೆಗೆ 8,000 ಭಾರತೀಯ ಪ್ರಜೆಗಳು ದೇಶಕ್ಕೆ ಮರಳಿದ್ದಾರೆ. ಸರ್ಕಾರ ಭಾರತೀಯ ಪ್ರಜೆಗಳೊಂದಿಗೆ ನಿರಂತರ ಸಂವಹನ ನಡೆಸುತ್ತಿದೆ ಮತ್ತು ಬಾಂಗ್ಲಾದೇಶದ ಹೈಕಮಿಷನ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವ ಜೈಶಂಕರ್ ತಿಳಿಸಿದ್ದಾರೆ. ಅಲ್ಪಸಂಖ್ಯಾತರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಅವರ ರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸರ್ವಪಕ್ಷ ನಾಯಕರಿಗೆ ಸಭೆಯಲ್ಲಿ ತಿಳಿಸಲಾಗಿದೆ ಎಂದು ವರದಿಗಳು ಹೇಳಿವೆ.

Previous Post
30 ಸಾವಿರ ಬಿದಿರು ಸಸಿ ನೆಡುವ ಅಭಿಯಾನಕ್ಕೆ ಈಶ್ವರ ಖಂಡ್ರೆ ಚಾಲನೆ
Next Post
ಭಾರತದಲ್ಲಿ ತಂಗಲು ಬಹಳ‌ ಕಡಿಮೆ ಅವಧಿಯಲ್ಲಿ ಹಸೀನಾ ಮನವಿ ಮಾಡಿದ್ದರು ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಹೇಳಿಕೆ

Recent News