ಬಿಲ್ಕಿಸ್ ಬಾನು ಪ್ರಕರಣ: ಅಪರಾಧಿಗಳ ಅರ್ಜಿ ವಜಾ

ಬಿಲ್ಕಿಸ್ ಬಾನು ಪ್ರಕರಣ: ಅಪರಾಧಿಗಳ ಅರ್ಜಿ ವಜಾ

ನವದೆಹಲಿ, ಜು. 19: ಗುಜರಾತ್ ಸರ್ಕಾರ ತಮಗೆ ನೀಡಿದ್ದ ಕ್ಷಮಾದಾನ ರದ್ದು ಮಾಡಿರುವ ಜನವರಿ 8 ತೀರ್ಪನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಅತ್ಯಾಚಾರ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಅಪರಾಧಿಗಳ ಅರ್ಜಿಯು ಸಂಪೂರ್ಣ ದುರುದ್ದೇಶದಿಂದ ಕೂಡಿದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರ ಪೀಠವು ಹೇಳಿದೆ.
“ನ್ಯಾಯಮೂರ್ತಿ ಖನ್ನಾ ಅವರು, “ಸಂವಿಧಾನದ ಪರಿಚ್ಛೇದ 32ರಡಿ ಈ ಅರ್ಜಿ ಸಲ್ಲಿಸಲು ಹೇಗೆ ಸಾಧ್ಯ? ಇನ್ನೊಂದು ಪೀಠ ನೀಡಿದ ತೀರ್ಪಿನ ವಿರುದ್ದ ಸಲ್ಲಿಸಲಾದ ಮೇಲ್ಮನವಿಯನ್ನು ಆಲಿಸಲು ಸಾಧ್ಯವಿಲ್ಲ” ಎಂದಿದ್ದಾರೆ. ಈ ವೇಳೆ ಅಪರಾಧಿಗಾಳ ರಾಧೇಶ್ಯಾಮ್ ಭಗವಾನ್‌ದಾಸ್ ಶಾ ಮತ್ತು ರಾಜುಭಾಯ್ ಸೋನಿ ಪರ ಹಾಜರಿದ್ದ ವಕೀಲ ರಿಷಿ ಮಲ್ಹೋತ್ರಾ ಅವರು, ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡಿ ಎಂದು ಅನುಮತಿ ಕೋರಿದರು. ನ್ಯಾಯಪೀಠವು ಅರ್ಜಿಯನ್ನು ಹಿಂಪಡೆಯಲು ವಕೀಲರಿಗೆ ಅವಕಾಶ ನೀಡಿತು.

2002ರಲ್ಲಿ ಗೋಧ್ರಾ ರೈಲು ದುರಂತದ ಬಳಿಕ ಗುಜರಾತ್‌ನಲ್ಲಿ ನಡೆದ ಹಿಂಸಾಚಾರದ ವೇಳೆ ಸುರಕ್ಷಿತ ಜಾಗಕ್ಕೆ ತೆರಳುತ್ತಿದ್ದ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಅವರ ಮೂರು ವರ್ಷದ ಮಗಳೂ ಸೇರಿದಂತೆ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಲಾಗಿತ್ತು.
ಪ್ರಕರಣ ಸಂಬಂಧ ಬಕಭಾಯಿಯಿ ವೋಹಾನಿಯಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಗೋವಿಂದ್ ನಾಯ್, ಜಸ್ವಂತ್ ನಾಯ್, ಮಿತೇಶ್ ಭಟ್, ಪ್ರದೀಪ್ ಮೋರ್ಧಿಯಾ, ರಾಧೇಶ್ಯಾಮ್ ಶಾ, ರಾಜುಭಾಯ್ ಸೋನಿ, ರಮೇಶ್ ಚಂದನಾ ಮತ್ತು ಶೈಲೇಶ್ ಭಟ್ ವಿರುದ್ದ ಪ್ರಕರಣ ದಾಖಲಾಗಿತ್ತು. ಇವರ ವಿರುದ್ದದ ಆರೋಪ ಸಾಭೀತಾದ ಹಿನ್ನೆಲೆ 2008ರಲ್ಲಿ ಎಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ, ಗುಜರಾತ್ ಸರ್ಕಾರದ ಆದೇಶದ ಮೇರೆಗೆ ಎಲ್ಲಾ ಅಪರಾಧಿಗಳು 2022ರ ಆಗಸ್ಟ್ 15ರಂದು ಜೈಲಿನಿಂದ ಬಿಡುಗಡೆಯಾಗಿದ್ದರು.
ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಬಿಲ್ಕಿಸ್ ಬಾನು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಅಪರಾಧಿಗಳನ್ನು ಬಿಡುಗಡೆ ಮಾಡುವ ಅಧಿಕಾರ ಇರುವುದು ಪ್ರಕರಣದ ವಿಚಾರಣೆ ನಡೆಸಿದ ಮಹಾರಾಷ್ಟ್ರ ಸರ್ಕಾರಕ್ಕೆ, ಗುಜರಾತ್ ಸರ್ಕಾರಕ್ಕೆ ಆ ಅಧಿಕಾರ ಇಲ್ಲ ಎಂದಿತ್ತು. ಮುಂದಿನ ಎರಡು ವಾರದೊಳಗೆ ಅಪರಾಧಿಗಳು ಜೈಲಿಗೆ ಹಿಂದಿರುಗಬೇಕು ಎಂದು ಜನವರಿ 8ರಂದು ಆದೇಶ ನೀಡಿತ್ತು. ಸುಪ್ರೀಂ ಕೋರ್ಟ್‌ನ ಈ ಆದೇಶ ಪ್ರಶ್ನಿಸಿ ಅಪರಾಧಿಗಳಾದ ರಾಧೇಶ್ಯಾಮ್ ಭಗವಾನ್‌ದಾಸ್ ಶಾ ಮತ್ತು ರಾಜುಭಾಯ್ ಸೋನಿ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ಇಂದು ನ್ಯಾಯಾಲಯ ವಜಾಗೊಳಿಸಿದೆ.

Previous Post
ಅಂಬಾನಿ ಮದುವೆಯ ಒಪ್ಪಂದ ಏಕೆ ತಿರಸ್ಕರಿಸಿದೆ?4 ಕಾರಣ ಕೊಟ್ಟ ಯೂಟ್ಯೂಬರ್
Next Post
ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಡಿಎಂಕೆ

Recent News