ಬುರ್ಕಾ ನಿಷೇಧಿಸಿದ ಕಾಲೇಜು ಆದೇಶಕ್ಕೆ ಸುಪ್ರೀಂ ಮಧ್ಯಂತರ ತಡೆ

ಬುರ್ಕಾ ನಿಷೇಧಿಸಿದ ಕಾಲೇಜು ಆದೇಶಕ್ಕೆ ಸುಪ್ರೀಂ ಮಧ್ಯಂತರ ತಡೆ

ನವದೆಹಲಿ : ಕ್ಯಾಂಪಸ್‌ನೊಳಗೆ ಹಿಜಾಬ್, ನಕಾಬ್, ಬುರ್ಖಾ, ಶಾಲು, ಟೋಪಿ ಇತ್ಯಾದಿಗಳನ್ನು ಧರಿಸುವುದನ್ನು ನಿಷೇಧಿಸಿದ್ದ ಮುಂಬೈ ಕಾಲೇಜಿನ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಮುಂಬೈನ ಎನ್‌ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ.  ಕಾಲೇಜಿನ ನಿಯಮಗಳನ್ನು ಎತ್ತಿ ಹಿಡಿದಿದ್ದ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ನ್ಯಾ. ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರ ಪೀಠವು ವಿಚಾರಣೆ ನಡೆಸಿ ಕಾಲೇಜು ವಿಧಿಸಿರುವ ಷರತ್ತುಗಳ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿತು‌. ವಿದ್ಯಾರ್ಥಿಗಳ ಧರ್ಮವನ್ನು ಬಹಿರಂಗಪಡಿಸಬಾರದು ಎಂಬ ಉದ್ದೇಶದಿಂದ ನಿಯಮ ವಿಧಿಸಲಾಗಿದೆ ಎಂಬ ಕಾಲೇಜಿನ ವಾದಕ್ಕೆ ಕಿಡಿಕಾರಿದ ನ್ಯಾಯಮೂರ್ತಿ ಖನ್ನಾ, ಏನಿದು ನಿಯಮ? ಧರ್ಮ ಬಹಿರಂಗಪಡಿಸಬಾರದಾ? ಇಂತಹ ನಿಯಮಗಳನ್ನು ಹೇರಬೇಡಿ. ವಿದ್ಯಾರ್ಥಿಗಳ ಹೆಸರನ್ನೂ ನೀವು ಬಹಿರಂಗಪಡಿಸುವುದಿಲ್ವಾ? ಹಾಗಾದರೆ, ಅವರನ್ನು ಸಂಖ್ಯೆಗಳಿಂದ ಗುರುತಿಸುತ್ತೀರಾ? ಎಂದು ಕೇಳಿದರು. ಕಾಲೇಜು ಪರ ವಾದ ಮಂಡಿಸಿದ ಹಿರಿಯ ವಕೀಲೆ ಮಾಧವಿ ದಿವಾನ್, ಅದು ಖಾಸಗಿ ಸಂಸ್ಥೆ, 2008ರಿಂದ ಕಾಲೇಜು ನಡೆಯುತ್ತಿದೆ ಎಂದರು. ಈ ವೇಳೆ ಮರುಪ್ರಶ್ನೆ ಕೇಳಿದ ನ್ಯಾಯಲಯ ಇಷ್ಟು ವರ್ಷಗಳಲ್ಲಿ ಯಾವುದೇ ನಿಯಮಗಳು ಇರಲಿಲ್ಲ. ಈಗ ಹಠಾತ್ ಆಗಿ ನಿಮಗೆ ಧರ್ಮ ನೆನಪಾಯಿತಾ? ಎಂದು ಕೇಳಿದ್ದು, ಬಹಳ ವರ್ಷಗಳ ನಂತರ ನೀವು ಅಂತಹ ಸೂಚನೆಗಳನ್ನು ನೀಡುತ್ತಿರುವುದು ದುರದೃಷ್ಟಕರ ಎಂದಿತು. 441 ಮುಸ್ಲಿಂ ವಿದ್ಯಾರ್ಥಿಗಳು ಸಂತೋಷದಿಂದ ಕಾಲೇಜಿಗೆ ಹಾಜರಾಗುತ್ತಿದ್ದಾರೆ’ ಎಂದು ವಕೀಲೆ ದಿವಾನ್ ನ್ಯಾಯಾಲಯಕ್ಕೆ ತಿಳಿಸಿದ್ದು, ಕೆಲವು ಮುಸ್ಲಿಂ ವಿದ್ಯಾರ್ಥಿಗಳಿಂದ ಮಾತ್ರ ಆಕ್ಷೇಪಣೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಯಾವಾಗಲೂ ಹಿಜಾಬ್ ಧರಿಸುವುದಿಲ್ಲ ಎಂದು ಹೇಳಿದ್ದಾರೆ. ಕಾಲೇಜಿನ ನಿಯಮ ಹುಡುಗಿ ಏನು ಧರಿಸಬೇಕೆಂದು ಸೂಚಿಸಿದಂತೆ ಆಗುವುದಿಲ್ಲವೇ? ಎಂದು ನ್ಯಾ. ಖನ್ನಾ ಕೇಳಿದ್ದು, ಮಹಿಳೆಯರಿಗೆ ಏನು ಧರಿಸಬೇಕೆಂದು ಹೇಳುವ ಮೂಲಕ ನೀವು ಹೇಗೆ ಸಬಲೀಕರಣ ಮಾಡುತ್ತೀರಿ? ತಿಲಕ ಧರಿಸಬೇಡಿ ಎಂದು ನೀವು ಹೇಳುತ್ತೀರಾ? ಎಂದು ನ್ಯಾ. ಖನ್ನಾ ಪ್ರಶ್ನಿಸಿದ್ದಾರೆ. ಕಡೆಗೆ ವಿದ್ಯಾರ್ಥಿನಿಯರಿಗೆ ಕಾಲೇಜು ಬಿಟ್ಟು ಹೋಗುವಂತೆ ಹೇಳಬೇಡಿ. ನಿಮ್ಮ ನಿಯಮಗಳ ಆದೇಶವನ್ನು ತಡೆ ಹಿಡಿಯಿರಿ ಎಂದು ಆದೇಶಿಸಿದ್ದಾರೆ.

Previous Post
NEET-PG 2024 ಪರೀಕ್ಷೆ ಮುಂದೂಡಿಕೆ ಸುಪ್ರೀಂಕ ನಕಾರ
Next Post
ನಾನು ಬಿಜೆಪಿ-ಜೆಡಿಎಸ್ ಷಡ್ಯಂತ್ರಕ್ಕೆ ಬಲಿಯಾಗುವವನಲಲ್ಲ , ಇದೆಲ್ಲಾ ನೋಡುತ್ತಾ ಕೈ ಕಟ್ಟಿ ಕೂರುವವನಲ್ಲ: ಸಿ.ಎಂ.ಸಿದ್ದರಾಮಯ್ಯ ಘೋಷಣೆ

Recent News