ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್‌: ನಿರಾಶೆ ವ್ಯಕ್ತಪಡಿಸಿದ ಕುಸ್ತಿಪಟುಗಳು

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್‌: ನಿರಾಶೆ ವ್ಯಕ್ತಪಡಿಸಿದ ಕುಸ್ತಿಪಟುಗಳು

ನವದೆಹಲಿ, ಮೇ 3: ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಿಜೆಪಿ ಸಂಸದ, ಭಾರತೀಯ ಕುಸ್ತಿ ಫೆಡರೇಶನ್‌ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ವ್ಯಾಪಕ ಪ್ರತಿಭಟನೆ ನಡೆಸಿದ್ದರು. ಅವರನ್ನು ಆ ಬಳಿಕ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿ ಪ್ರಕರಣ ದಾಖಲಿಸಲಾಗಿತ್ತು. ಉತ್ತರಪ್ರದೇಶದ ಕೈಸರ್‌ಗಂಜ್ ಕ್ಷೇತ್ರದ ಹಾಲಿ ಸಂಸದರಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ಈ ಬಾರಿ ಟಿಕೆಟ್‌ ನೀಡಲಾಗಿಲ್ಲ. ಬದಲಾಗಿ ಆತನ ಪುತ್ರನಿಗೆ ಟಿಕೆಟ್‌ ನೀಡಲಾಗಿದ್ದು, ಕುಸ್ತಿಪಟುಗಳ ಆಕ್ಷೇಪಕ್ಕೆ ಕಾರಣವಾಗಿದೆ.

ಬ್ರಿಜ್ ಭೂಷಣ್ ಅವರ ಕಿರಿಯ ಮಗ ಕರಣ್‌ಗೆ(33) ಫೆಬ್ರವರಿಯಲ್ಲಿ ಉತ್ತರಪ್ರದೇಶ ಕುಸ್ತಿ ಅಸೋಸಿಯೇಷನ್ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಇದೇ ಕರಣ್ ಭೂಷಣ್ ಸಿಂಗ್‌ಗೆ ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್‌ ನೀಡಿರುವುದು ಭಾರೀ ಟೀಕೆಗೆ ಕಾರಣವಾಗಿದೆ. ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಭಾರತದ ಹೆಣ್ಣುಮಕ್ಕಳು ಸೋತಿದ್ದಾರೆ, ಬ್ರಿಜ್ ಭೂಷಣ್ ಗೆದ್ದಿದ್ದಾರೆ ಎಂದು ಬರೆದಿದ್ದಾರೆ. ನಾವೆಲ್ಲರೂ ನಮ್ಮ ವೃತ್ತಿಜೀವನವನ್ನು ಪಣಕ್ಕಿಟ್ಟಿದ್ದೇವೆ, ಬೀದಿಯಲ್ಲಿ ದಿನಗಳನ್ನು ಕಳೆದಿದ್ದೇವೆ. ಬ್ರಿಜ್ ಭೂಷಣ್ ಅವರನ್ನು ಇನ್ನೂ ಬಂಧಿಸಿಲ್ಲ. ನಾವು ಯಾವತ್ತೂ ಕೇಳಿದ್ದು ನ್ಯಾಯ ಮಾತ್ರ. ಆದರೆ ಬಂಧಿಸುವುದು ಬಿಡಿ, ಅವರ ಮಗನಿಗೆ ಟಿಕೆಟ್ ಸಿಕ್ಕಿದ್ದು ಅದು ಭಾರತದ ಕೋಟ್ಯಂತರ ಹೆಣ್ಣುಮಕ್ಕಳ ಉತ್ಸಾಹವನ್ನು ಮುರಿದಿದೆ. ಅವರ ಕುಟುಂಬಕ್ಕೆ ಟಿಕೆಟ್ ನೀಡಲಾಗಿದೆ. ಒಬ್ಬ ವ್ಯಕ್ತಿಯ ಮುಂದೆ ಸರ್ಕಾರ ಏಕೆ ದುರ್ಬಲವಾಗಿದೆ? ನಿಮಗೆ ಬೇಕಾಗಿರುವುದು ಭಗವಾನ್ ರಾಮನ ಹೆಸರಿನಲ್ಲಿ ಮತಗಳು, ಅವರ ನೀತಿಗಳನ್ನು ಅನುಸರಿಸುವ ಬಗ್ಗೆ ನಿಮ್ಮ ನಿಲುವು ಏನು? ಎಂದು ಸಾಕ್ಷಿ ಮಲಿಕ್‌ ಪ್ರಶ್ನಿಸಿದ್ದಾರೆ.

ಕಳೆದ ವರ್ಷ ಬ್ರಿಜ್ ಭೂಷಣ್ ಅವರ ಸಹಾಯಕ ಸಂಜಯ್ ಸಿಂಗ್ WFI ಚುನಾವಣೆಯಲ್ಲಿ ಗೆದ್ದ ನಂತರ ಪ್ರತಿಭಟನೆ ವ್ಯಕ್ತಪಡಿಸಿ ಸಾಕ್ಷಿ ಮಲಿಕ್ ಕುಸ್ತಿಗೆ ನಿವೃತ್ತಿ ಘೋಷಿಸಿದ್ದರು. ನಾವು ತೀವ್ರವಾಗಿ ನಿರಾಶೆಗೊಂಡಿದ್ದೇವೆ. ಕುಸ್ತಿಪಟುಗಳಿಗೆ ಇನ್ನೂ ಯಾವುದೇ ನ್ಯಾಯ ಸಿಕ್ಕಿಲ್ಲ ಮತ್ತು ಕರಣ್ ಅವರಿಗೆ ಟಿಕೆಟ್‌ ಸಿಕ್ಕಿರುವುದು ಯಾರೂ ನಮ್ಮ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುವುದಿಲ್ಲ ಎಂಬುವುದನ್ನು ತೋರಿಸುತ್ತದೆ. ನನ್ನ ಮಗಳು ಪ್ರತಿಭಟಿಸಿ ಕುಸ್ತಿಯನ್ನು ತೊರೆದಳು. ಭಜರಂಗ್ ಮತ್ತು ವಿನೇಶ್ ತಮ್ಮ ರಾಷ್ಟ್ರೀಯ ಗೌರವಗಳನ್ನು ಹಿಂದಿರುಗಿಸಿದರು, ಎಲ್ಲವೂ ವ್ಯರ್ಥವಾಯಿತು ಎಂದು ತೋರುತ್ತದೆ ಎಂದು ಮಲಿಕ್ ಅವರ ತಾಯಿ ಹೇಳಿದ್ದಾರೆ.

ಜೂನ್ 2023ರಲ್ಲಿ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354, 354D, 345Aಯಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ 1,000 ಪುಟಗಳ ಚಾರ್ಜ್‌ಶೀಟ್‌ನ್ನು ಸಲ್ಲಿಸಿದ್ದರು. ಸದ್ಯ ಪ್ರಕರಣದ ವಿಚಾರಣೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಈ ಕುರಿತ ಮುಂದಿನ ವಿಚಾರಣೆ ಮೇ.7ರಂದು ನಡೆಯಲಿದೆ.
ಕುಸ್ತಿಪಟು ಜಿತೇಂದರ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕರಣ್‌ಗೆ ಬಿಜೆಪಿ ಟಿಕೆಟ್‌ ನೀಡಿರುವುದು “ಬೆನ್ನಿಗೆ ಇರಿತ” ಎಂದು ಕರೆದಿದ್ದಾರೆ. ಇದಕ್ಕಾಗಿಯೇ ನಾವು ರಸ್ತೆಗಳಲ್ಲಿ ಮಲಗಿದ್ದೇವೆಯೇ? ನಾವು ಹೋರಾಟ ಮಾಡಿದ್ದು ಇದಕ್ಕಾಗಿಯೇ? ಬ್ರಿಜ್ ಭೂಷಣ್ ಅವರ ಜನರು WFIನ ನಾಯಕತ್ವ ವಹಿಸಿಕೊಂಡರು ಮತ್ತು ಈಗ ಅವರ ಮಗ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆದಿದ್ದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಖ್ಯಾತ ಕುಸ್ತಿಪಟು ಬಜರಂಗ್ ಪುನಿಯ, ಬಿಜೆಪಿ ಮಹಿಳೆಯರ ಸುರಕ್ಷತೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಹಾಗೂ ಪರಿವಾರವಾದ ಅಥವಾ ವಂಶಪಾರಂಪರ್ಯ ರಾಜಕಾರಣ ಆಡಳಿತಾರೂಢ ಬಿಜೆಪಿಯಲ್ಲೂ ಬೇರೂರಿದೆ ಎಂದು ಹೇಳಿದ್ದಾರೆ.

Previous Post
ಶಿವಸೇನೆ ನಾಯಕರನ್ನು ಕರೆತರಬೇಕಿದ್ದ ಕಾಪ್ಟರ್ ಪತನ
Next Post
ಧರ್ಮವನ್ನು ಆಯುಧವನ್ನಾಗಿ ಬಳಸುತ್ತಿರುವ ಬಿಜೆಪಿ: ಪರಕಾಲ ಪ್ರಭಾಕರ್

Recent News