ಭಾರತದಿಂದ ವಶಪಡಿಸಿಕೊಂಡ ಅರುಣಾಚಲ ಪ್ರದೇಶದ ಭೂಭಾಗಕ್ಕೆ ತನ್ನ ಹೆಸರಿಟ್ಟ ಚೀನಾ

ಭಾರತದಿಂದ ವಶಪಡಿಸಿಕೊಂಡ ಅರುಣಾಚಲ ಪ್ರದೇಶದ ಭೂಭಾಗಕ್ಕೆ ತನ್ನ ಹೆಸರಿಟ್ಟ ಚೀನಾ

ನವದೆಹಲಿ, ಏ. 1: ಭಾರತದ ಭೂಭಾಗದ ಮೇಲೆ ಚೀನಾ ಹಕ್ಕು ಸಾಧಿಸುವುದನ್ನು ಮುಂದುವರಿಸಿದ್ದು, ಅರುಣಾಚಲ ಪ್ರದೇಶದ ಭೂಭಾಗವನ್ನು ಒಳಗೊಂಡ 30 ಪ್ರದೇಶಗಳ ಚೀನಿ ಹೆಸರಿನ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅರುಣಾಚಲ ಪ್ರದೇಶದ ಸ್ಥಳಗಳ ಮರುನಾಮಕರಣವನ್ನು ಭಾರತ ತಿರಸ್ಕರಿಸುತ್ತಿದೆ. ರಾಜ್ಯವು ದೇಶದ ಅವಿಭಾಜ್ಯ ಅಂಗವಾಗಿದೆ ಎಂದು ಭಾರತ ಪ್ರತಿಪಾದಿಸಿದೆ. ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಜಂಗ್ನಾನ್‌ನಲ್ಲಿ ಪ್ರಮಾಣೀಕೃತ ಭೌಗೋಳಿಕ ಹೆಸರುಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಚೀನಾ ಹೇಳುತ್ತಿದೆ ಎಂದು ಸರ್ಕಾರಿ ಗ್ಲೋಬಲ್ ಟೈಮ್ಸ್ ಭಾನುವಾರ ವರದಿ ಮಾಡಿದೆ. ಸಚಿವಾಲಯದ ಅಧಿಕೃತ ವೆಬ್‌ಸೈಟ್ ಈ ಪ್ರದೇಶಕ್ಕೆ 30 ಹೆಚ್ಚುವರಿ ಹೆಸರುಗಳನ್ನು ನೀಡಿದೆ. ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಜಂಗ್ನಾನ್‌ನಲ್ಲಿನ ಆರು ಸ್ಥಳಗಳ ಪ್ರಮಾಣಿತ ಹೆಸರುಗಳ ಮೊದಲ ಪಟ್ಟಿಯನ್ನು 2017ರಲ್ಲಿ ಬಿಡುಗಡೆ ಮಾಡಿತ್ತು, ಇದಾದ ಬಳಿಕ 15 ಸ್ಥಳಗಳ ಎರಡನೇ ಪಟ್ಟಿಯನ್ನು 2021ರಲ್ಲಿ ಬಿಡುಗಡೆ ಮಾಡಿದೆ ಮತ್ತು ನಂತರ 2023ರಲ್ಲಿ 11 ಸ್ಥಳಗಳಿಗೆ ಹೆಸರುಗಳೊಂದಿಗೆ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಅರುಣಾಚಲ ಪ್ರದೇಶದಲ್ಲಿ 13,000 ಅಡಿ ಎತ್ತರದಲ್ಲಿ ನಿರ್ಮಿಸಲಾದ ಸೇಲಾ ಸುರಂಗದ ಉದ್ಘಾಟಣೆ, ಪ್ರಧಾನಿ ಭೇಟಿ ಬಳಿಕ ಚೀನಾ ಭಾರತದೊಂದಿಗೆ ರಾಜತಾಂತ್ರಿಕ ಪ್ರತಿಭಟನೆಯನ್ನು ಮುಂದುವರಿಸಿದೆ. ಚೀನಾದ ವಿದೇಶಾಂಗ ಮತ್ತು ರಕ್ಷಣಾ ಸಚಿವಾಲಯಗಳು ಈ ಪ್ರದೇಶದ ಮೇಲೆ ಹಕ್ಕು ಪ್ರತಿಪಾದಿಸಿ ನೀಡುವ ಹೇಳಿಕೆಗಳು ಕೋಲಾಹಲಕ್ಕೆ ಕಾರಣವಾಗಿದೆ. ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದ (ಎನ್‌ಯುಎಸ್) ಪ್ರತಿಷ್ಠಿತ ಇನ್‌ಸ್ಟಿಟ್ಯೂಟ್ ಆಫ್ ಸೌತ್ ಏಷ್ಯನ್ ಸ್ಟಡೀಸ್ (ಐಎಸ್‌ಎಎಸ್) ನಲ್ಲಿ ಉಪನ್ಯಾಸದ ವೇಳೆ ಮಾತನಾಡಿದ ಎಸ್.ಜೈಶಂಕರ್, ಇದು ಹೊಸ ವಿಚಾರವಲ್ಲ. ಅರುಣಾಚಲ ಪ್ರದೇಶದ ಮೇಲೆ ಪುನಾರಾವರ್ತಿತವಾಗಿ ಹಕ್ಕು ಪ್ರತಿಪಾದಿಸುತ್ತಿರುವ ಚೀನಾದ ನಡೆ ಹಾಸ್ಯಾಸ್ಪದ. ನಮ್ಮ ಗಡಿ ರಾಜ್ಯ ಅರುಣಾಚಲ ಪ್ರದೇಶ ನೈಸರ್ಗಿಕವಾಗಿಯೇ ಭಾರತದ ಅವಿಭಾಜ್ಯ ಅಂಗ. ಆದ್ದರಿಂದ, ನಾವು ಈ ಬಗ್ಗೆ ಬಹಳ ಸ್ಪಷ್ಟವಾಗಿ, ಸ್ಥಿರವಾಗಿರುತ್ತೇವೆ ಎಂದು ನಾನು ಭಾವಿಸುತ್ತೇನೆ ಮತ್ತು ಇದು ನಡೆಯುತ್ತಿರುವ ಗಡಿ ಚರ್ಚೆಗಳ ಭಾಗವಾಗಿದೆ ಎಂದು ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದರು.

ಅರುಣಾಚಲ ಪ್ರದೇಶವನ್ನು ಭಾರತದ ಭೂ ಭಾಗವಾಗಿ ಗುರುತಿಸುವ ಅಮೆರಿಕದ ಹೇಳಿಕೆಯ ಬಗ್ಗೆ ಬೀಜಿಂಗ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್ ಮಾರ್ಚ್ 9ರಂದು ಅರುಣಾಚಲ ಪ್ರದೇಶವನ್ನು ಯುಎಸ್ ಭಾರತದ ಭೂಪ್ರದೇಶವೆಂದು ಗುರುತಿಸುತ್ತದೆ. ಗಡಿ ನಿಯಂತ್ರಣ ರೇಖೆಯಾದ್ಯಂತ ಆಕ್ರಮಣ ಅಥವಾ ಮಿಲಿಟರಿಗಳ ಮೂಲಕ ಯಾವುದೇ ಏಕಪಕ್ಷೀಯ ಪ್ರಯತ್ನಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಅಮೆರಿಕಾ ಹೇಳಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಚೀನಾದ ವಿದೇಶಾಂಗ ಮತ್ತು ರಕ್ಷಣಾ ಸಚಿವಾಲಯಗಳು, ಇದು ಚೀನಾ-ಭಾರತದ ಗಡಿ ಸಮಸ್ಯೆ, ಇದು ಉಭಯ ದೇಶಗಳ ನಡುವಿನ ವಿಷಯವಾಗಿದೆ ಮತ್ತು ಇದರಲ್ಲಿ ಅಮೆರಿಕ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಹೇಳಿದೆ.

Previous Post
ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್ ಗೆ 15 ದಿನ ನ್ಯಾಯಾಂಗ ಬಂಧನ
Next Post
IT ನೋಟಿಸ್: ಕಾಂಗ್ರೆಸಿಗೆ ಸುಪ್ರೀಂನಿಂದ ಬಿಗ್ ರಿಲೀಫ್

Recent News