ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

ಕೋಲ್ಕತ್ತಾ, ಮೇ 4: ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ ತನ್ನ ವಿರುದ್ಧ ಸಾರ್ವಜನಿಕ ಹೇಳಿಕೆಯನ್ನು ನೀಡಿದ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರಿಗೂ ನಿಷೇಧವನ್ನು ವಿಧಿಸಿದ್ದಾರೆ.

ಚುನಾವಣಾ ಸಮಯದಲ್ಲಿ ರಾಜಕೀಯ ಲಾಭಕ್ಕೆ ಅನಧಿಕೃತ, ಕಾನೂನುಬಾಹಿರ ತನಿಖೆಯ ನೆಪ ನೆಪದಲ್ಲಿ ಪೊಲೀಸರು ರಾಜಭವನ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ರಾಜಭವನ ತಿಳಿಸಿದ್ದು, ಇದು ಪ.ಬಂಗಾಳದ ರಾಜ್ಯ ಸರಕಾರ ಮತ್ತು ರಾಜಭವನದ ನಡುವಿನ ಸಂಘರ್ಷವನ್ನು ಹೆಚ್ಚಿಸಿದೆ.

ಈ ಕುರಿತು ರಾಜಭವನ ಹೇಳಿಕೆಯನ್ನು ಹೊರಡಿಸಿದ್ದು, ರಾಜ್ಯಪಾಲರ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಸಚಿವರ ವಿರುದ್ಧ ಮುಂದಿನ ಕಾನೂನು ಕ್ರಮಗಳ ಕುರಿತು ಸಲಹೆಗಾಗಿ ಭಾರತದ ಅಟಾರ್ನಿ ಜನರಲ್ ಅವರನ್ನು ಸಂಪರ್ಕಿಸಲಾಗಿದೆ. ಅನಧಿಕೃತವಾಗಿ ಮತ್ತು ನ್ಯಾಯಸಮ್ಮತವಲ್ಲದ ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನವನ್ನು ಪ್ರವೇಶಿಸುವುದನ್ನು ಗೌರವಾನ್ವಿತ ರಾಜ್ಯಪಾಲರು ನಿಷೇಧಿಸಿದ್ದಾರೆ ಎಂದು ತಿಳಿಸಿದೆ.

ರಾಜ್ಯಪಾಲರು ರಾಜಭವನದ ಸಿಬ್ಬಂದಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಬೆನ್ನಲ್ಲಿ ಈ ಬೆಳವಣಿಗೆ ನಡೆದಿದೆ. ರಾಜ್ಯಪಾಲರು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದರು. ತಮ್ಮ ವಿರುದ್ಧ ಮಾನಹಾನಿಕರ ಮತ್ತು ಸಂವಿಧಾನ ವಿರೋಧಿ ಮಾಧ್ಯಮ ಹೇಳಿಕೆಗಳನ್ನು ನೀಡಿದ್ದಾರೆಂದು ರಾಜ್ಯ ಹಣಕಾಸು ಇಲಾಖೆ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರನ್ನು ರಾಜಧಾನಿ ಕೋಲ್ಕತ್ತಾ, ಡಾರ್ಜಿಲಿಂಗ್ ಮತ್ತು ಬ್ಯಾರಕ್‌ಪೋರ್‌ನಲ್ಲಿರುವ ಭವನದ ಆವರಣಕ್ಕೆ ಪ್ರವೇಶಿಸದಂತೆ ರಾಜ್ಯಪಾಲರು ನಿರ್ಬಂಧ ವಿಧಿಸಿದ್ದಾರೆ.

ರಾಜಭವನದಲ್ಲಿ ಏನಾಗುತ್ತಿದೆ ಎಂದು ನಾನು ಆಶ್ಚರ್ಯ ಪಡುತ್ತೇನೆ ಮತ್ತು ಅದು ಕೂಡ ಪ್ರಧಾನ ಮಂತ್ರಿ ರಾಜ್ಯಕ್ಕೆ ಬರುವ ದಿನದಂದು, ಗವರ್ನರ್ ಲೈಂಗಿಕ ಕಿರುಕುಳದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ನಾವು ಯಾವ ರೀತಿಯ ರಾಜ್ಯದಲ್ಲಿ ಇದ್ದೇವೆ ಎಂದು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು ರಾಜ್ಯಪಾಲರ ಲೈಂಗಿಕ ದೌರ್ಜನ್ಯದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ ಹೇಳಿದ್ದರು.

ರಾಜ್ಯಪಾಲರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ರಾಜಭವನದ ಮಹಿಳಾ ಉದ್ಯೋಗಿಯೊಬ್ಬರು ಮೊದಲು ಕೋಲ್ಕತ್ತಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲಿ ಪ.ಬಂಗಾಳದಲ್ಲಿ ಪ್ರಕರಣ ಭಾರೀ ಸದ್ದು ಮಾಡಿದೆ. ಈ ಕುರಿತು ಮಾತನಾಡಿದ ಕೇಂದ್ರ ವಿಭಾಗದ ಉಪ ಆಯುಕ್ತೆ ಇಂದಿರಾ ಮುಖರ್ಜಿ, ನಾವು ದೂರು ಸ್ವೀಕರಿಸಿದ್ದೇವೆ ಮತ್ತು ತನಿಖೆ ನಡೆಸುತ್ತಿದ್ದೇವೆ. ಕಾನೂನು ತಜ್ಞರೊಂದಿಗೆ ಈ ವಿಷಯದ ಬಗ್ಗೆ ಸಮಾಲೋಚಿಸುತ್ತಿದ್ದೇವೆ ಎಂದು ಹೇಳಿದ್ದರು.

Previous Post
ಪ್ರಜ್ವಲ್ ರೇವಣ್ಣ ಪ್ರಕರಣ: ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸಿಎಂಗೆ ರಾಹುಲ್ ಗಾಂಧಿ ಪತ್ರ
Next Post
ಮೂರನೇ ಹಂತದ ಮತದಾನ ಬಿಜೆಪಿಗೆಷ್ಟು ಮುಖ್ಯ?

Recent News