ಲೋಕಸಭಾ ಚುನಾವಣಾ ಗೆಲುವುಗೆ ಮೋದಿ ಮ್ಯಾಚ್ ಫಿಕ್ಸಿಂಗ್! ಕೇಜ್ರಿವಾಲ್ ಬಂಧನ ಖಂಡಿಸಿ ಶಕ್ತಿ ಪ್ರದರ್ಶನ | ಬಿಜೆಪಿ ವಿರುದ್ಧ ವಿಪಕ್ಷಗಳ ವಾಗ್ದಾಳಿ

ಲೋಕಸಭಾ ಚುನಾವಣಾ ಗೆಲುವುಗೆ ಮೋದಿ ಮ್ಯಾಚ್ ಫಿಕ್ಸಿಂಗ್! ಕೇಜ್ರಿವಾಲ್ ಬಂಧನ ಖಂಡಿಸಿ ಶಕ್ತಿ ಪ್ರದರ್ಶನ | ಬಿಜೆಪಿ ವಿರುದ್ಧ ವಿಪಕ್ಷಗಳ ವಾಗ್ದಾಳಿ

ನವದೆಹಲಿ : ಆಮ್ ಅದ್ಮಿ ಪಕ್ಷದ ಸಂಚಾಲಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ ಖಂಡಿಸಿ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ಘಟಬಂಧನ್ ನಾಯಕರು ಬೃಹತ್ ಸಮಾವೇಶ ನಡೆಸಿದರು. ಪ್ರಜಾಪ್ರಭುತ್ವ ಉಳಿಸಿ ಹೆಸರಿನಲ್ಲಿ ಇಲ್ಲಿಯ ರಾಮಲೀಲಾ ಮೈದಾನದಲ್ಲಿ ಮೋದಿ ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನ ಮಾಡುವುದಲ್ಲದೇ ಚುನಾವಣೆ ಹೊತ್ತಲ್ಲಿ ವಿಪಕ್ಷಗಳನ್ನು ಗುರಿಯಾಗಿಸಿರುವ ನಡೆಯನ್ನು ತೀವ್ರವಾಗಿ ಖಂಡಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಗಾಂಧಿ, ಪ್ರಿಯಾಂಕಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಜಾರ್ಖಂಡ ಸಿಎಂ ಚಂಪೈ ಸೂರೇನ್, ಡಿಎಂಕೆ ನಾಯಕ ತಿರುಚಿ ಶಿವ, ಟಿಎಂಸಿ ನಾಯಕ ಡೆರೆಕ್ ಒಬ್ರರೆಯನ್, ಸಿಪಿಎಂ ನಾಯಕ ಸಿತರಾಮ್ ಯಚೂರಿ, ಪಿಡಿಪಿ ನಾಯಕಿ ಮಹೆಬೂಬ ಮುಫ್ತಿ, ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಮತ್ತು ಹೇಮಂತ್ ಸೊರೆನ್ ಅವರ ಪತ್ನಿ ಕಲ್ಪನಾ ಸೊರೆನ್ ಸೇರಿದಂತೆ ಇಂಡಿಯಾ ಬ್ಲಾಕ್‌ನ ಬಹುತೇಕ ಎಲ್ಲಾ ಉನ್ನತ ನಾಯಕರು ಭಾಗಿಯಾಗಿದ್ದರು.

ಈ ಬೃಹತ್ ಸಭೆಯ ಮೂಲಕ ಸರ್ವಾಧಿಕಾರಿ ಮತ್ತು ಕೋಮುವಾದಿ ಸರ್ಕಾರದ ವಿರುದ್ಧ ದೇಶಾದ್ಯಂತ ಜನರು ಒಟ್ಟುಗೂಡಿದ್ದಾರೆ ಎಂಬ ಸಂದೇಶವನ್ನು ನೀಡುವ ಪ್ರಯತ್ನ ಮಾಡಲಾಯಿತು. ಸಭೆಯಲ್ಲಿ ಮಾತನಾಡಿದ ನಾಯಕರು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನವನ್ನು ಮೋದಿ ಸರ್ಕಾರ ಮಾಡುತ್ತಿದೆ, ವಿಪಕ್ಷಗಳನ್ನು ಅದರ ನಾಯಕರನ್ನು ಕಟ್ಟಿಹಾಕುವಷ್ಟು ಮೋದಿ ಹೆದರಿದ್ದಾರೆ ಎಂದು ಆರೋಪಿಸಿದರು.

ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ‌ ಮಲ್ಲಿಕಾರ್ಜುನ್ ಖರ್ಗೆ, ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ, ಐಟಿ ಇಡಿ ಸಿಬಿಐ ಮೂಲಕ ವಿರೋಧ ಪಕ್ಷ ಇರಲಿ ತಮ್ಮ ಮೈತ್ರಿ ಪಕ್ಷಗಳನ್ನು ಹೆದರಿಸುತ್ತಿದ್ದಾರೆ, ಬೆದರಿಸಿ ಶಾಸಕರ ಸಂಸದರನ್ನು ಖರೀದಿಸಿ ಸರ್ಕಾರ ರಚನೆ ಮಾಡಿದ್ದಾರೆ, ಮೋದಿ ಮತ್ತು ಅವರ ವಿಚಾರಣೆ ದೇಶದಂದ ತೊಲಗುವವರೆಗೂ ದೇಶದಲ್ಲಿ ಸಮೃದ್ಧಿ ಇರದು, ಸಂವಿಧಾನ ಉಳಿಸಬೇಕು, ಸಂವಿಧಾನ ಉಳಿದರೆ ಮೀಸಲಾತಿ ಸಿಗಲಿದೆ, ಬಡವರಿಗೆ ಹಕ್ಕುಗಳು ಲಭಿಸಲಿದೆ

ನಾವು ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ರಕ್ತವನ್ನು ಹರಿಸಿದ್ದೇವೆ ಮಾಜಿ ಪ್ರಧಾನಿ ಇಂದಿರಾಗಾಂಧಿ, ರಾಜೀವ್ ಗಾಂಧಿ ಜೀವವನ್ನು ತೆತ್ತಿದ್ದಾರೆ, ಬಿಜೆಪಿ, ಆರ್‌ಎಸ್‌ಎಸ್ ದೇಶಕ್ಕಾಗಿ ಏನ್ ಮಾಡಿದೆ ಸ್ವಾತಂತ್ರ ಹೋರಾಟದ‌ ಸಮಯದಲ್ಲಿ ಬ್ರಿಟಿಷ್ ರ ಪರವಾಗಿ ಸರ್ಕಾರಿ ನೌಕರಿ ಮಾಡುವಂತೆ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗಿಯಾಗದಂತೆ ಹೇಳುತ್ತಿತ್ತು. ಕೆಲವು ನಾಯಕರ ಅಭಿವೃದ್ಧಿಯನ್ನು ಮಾತ್ರ ಮೋದಿ ಬಯಸುತ್ತಿದ್ದಾರೆ. ಆರ್‌ಎಸ್‌ಎಸ್ ವಿಷ ಇದ್ದಂತೆ, ಅದರ ರುಚಿ ನೋಡಬೇಕು ಅಂತಾ ಪ್ರಯತ್ನಿಸಿದರೆ ಸಾವು ಸಂಭವಿಸುತ್ತಿದೆ ಹೀಗಾಗಿ ಅವರಿಂದ ದೂರವಿರಿ ಎಂದು ಕರೆ ನೀಡಿದರು.

ಸಂಸದ ರಾಹುಲ್‌ಗಾಂಧಿ ಮಾತನಾಡಿ, ಐಪಿಎಲ್‌ ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯುವಂತೆ ಬಿಜೆಪಿಯೂ ಮ್ಯಾಚ್ ಫಿಕ್ಸಿಂಗ್ ಮಾಡುವ ಪ್ರಯತ್ನ ಮಾಡುತ್ತಿದೆ. ಮ್ಯಾಚ್ ಆರಂಭವಾಗುವುದಕ್ಕೂ ಮುನ್ನ ನಮ್ಮ ಇಬ್ಬರು ಆಟಗಾರರನ್ನು ಬಂಧಿಸಿ ಬಿಜೆಪಿ ಜೈಲಿಗೆ ಹಾಕಿದೆ, ಅವರ 400 ಸ್ಥಾನಗಳ ಟಾರ್ಗೇಟ್ ಘೋಷಣೆ, ಇವಿಎಂ, ಸೋಶಿಯಲ್ ಮೀಡಿಯಾ ಎನ್ನುವ ಮ್ಯಾಚ್ ಫಿಕ್ಸಿಂಗ್ ಅನ್ನು ಆಧರಿಸಿದೆ

ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆ ನಿರ್ಬಂಧಿಸಿದೆ, ನಮ್ಮ ಬಳಿ ಚುನಾವಣಾ ಪ್ರಚಾರ ಮಾಡಲು ಹಣವಿಲ್ಲ ಮತ್ತೊಂದು ಕಡೆ ಚುನಾವಣಾ ಬಾಂಡ್ ಮೂಲಕ ಹಣ ಪಡೆದ ಬಿಜೆಪಿ ಇತರೆ ಪಕ್ಷದ ನಾಯಕರನ್ನು ಹೆದರಿಸುತ್ತಿದೆ, ಹಣ ನೀಡಿ ಖರೀದಿ ಮಾಡಲಾಗುತ್ತಿದೆ, ಆಮಿಷ್ಯಕ್ಕೆ ಒಳಗಾಗದಿದ್ದರೆ ಜೈಲಿಗೆ ಹಾಕಲಾಗುತ್ತಿದೆ ಈ ಮೂಲಕ ಮ್ಯಾಚ್ ಫಿಕ್ಸಿಂಗ್ ಪ್ರಯತ್ನ ಮಾಡಲಾಗುತ್ತಿದೆ, ಇದನ್ನು ಬರೀ ಮೋದಿ ಮಾಡುತ್ತಿಲ್ಲ, ಮೋದಿ ಜೊತೆಗೆ ಕೆಲವು ಉದ್ಯಮಿಗಳು ಸೇರಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಂವಿಧಾನ ಬದಲಾಯಿಸಲಾಗುವುದು ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ, ಇದು ಬರೀ ಹೇಳಿಕೆಯಲ್ಲ ಇದರ ಹಿಂದೆ ಅಜೆಂಡಾ ಇದೆ. ಯಾವತ್ತು ಈ ಸಂವಿಧಾನ ಅಂತ್ಯವಾಗಲಿದೆ ಅಂದೇ ದೇಶ ಅಂತ್ಯವಾಗಲಿದೆ, ಸಂವಿಧಾನ ಬದಲಾದ ದಿನವೇ ದೇಶ ಹಲವು ರಾಜ್ಯಗಳಾಗಿ ಒಡೆದು ಹೋಗಲಿದೆ, ದೇಶದ ಜನರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಈ ಬಾರಿಯ ಚುನಾವಣೆ ಬರೀ ಚುನಾವಣೆಯಲ್ಲ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಗಲಿದೆ, ಬಳಿಕ ದೇಶದ ಬಡವರ ಹಕ್ಕು ದುಡ್ಡಿದ್ದವರ ಪಾಲಾಗಲಿದೆ, ಭಾರತ ಮತ್ತು ಸಂವಿಧಾನ ಉಳಿಸಲು, ಬಡವರ, ರೈತರ ಹಕ್ಕು ರಕ್ಷಿಸಲು ಮತದಾನ ಮಾಡಬೇಕಿದೆ. ಇಂತಹ ಮಹತ್ವದ ಚುನಾವಣೆಯನ್ನು ಮ್ಯಾಚ್ ಫಿಕ್ಸಿಂಗ್ ಮಾಡಲಾಗುತ್ತಿದೆ ಎಂದರು ಆರೋಪಿಸಿದರು.

ಮಾಜಿ ಸಿಎಂ ಅಖಿಲೇಶ್ ಯಾದವ್ ಮಾತನಾಡಿ, ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಮೈದಾನದಲ್ಲಿ ನಾವು ಎಲ್ಲರೂ ಈ ಮೈದಾನದಲ್ಲಿ ಒಟ್ಟಾಗಿದ್ದೇನೆ ಅಂದರೆ ದೆಹಲಿಯಲ್ಲಿ ಅಧಿಕಾರದಲ್ಲಿ ಕೂತವರು ಹೆಚ್ಚು ದಿನ ಉಳಿಯುವುದಿಲ್ಲ. 400ರ ಗಡಿ ದಾಟಲಿದ್ದೇವೆ ಎಂದು ಬಿಜೆಪಿ ಹೇಳುತ್ತಿದೆ, ಅಷ್ಟು ವಿಶ್ವಾಸ ಇದ್ದರೆ ಕೇಜ್ರಿವಾಲ್ ಕಂಡು ಯಾಕಷ್ಟು ಆತಂಕ, ಹೇಮಂತ್ ಸೂರೇನ್ ಕಂಡು ಯಾಕೆ ಭಯ, ಜನರು ಬಿಜೆಪಿಗೆ ಛೀಮಾರಿ ಹಾಕುತ್ತಿದ್ದಾರೆ. ಬಿಜೆಪಿ ಬ್ರಹ್ಮಾಂಡದ ಅತ್ಯಂತ ಸುಳ್ಳು ಪಕ್ಷ, ಅಧಿಕಾರ ಉಳಿಸಿಕೊಳ್ಳಲು ಇಡಿ ಸಿಬಿಐ ಐಟಿ ಬಳಸಿಕೊಳ್ಳುತ್ತಿದೆ, ಎಲೆಕ್ಷನ್ ಬಾಂಡ್ ಮೂಲಕ ಚಂದಾ ವಸೂಲಿ ಮಾಡುತ್ತಿದೆ, ಇದನ್ನು ಮುಚ್ಚಿಕೊಳ್ಳಲು ವಿಪಕ್ಷಗಳ ನಾಯಕರ ಮೇಲೆ ಸುಳ್ಳು ಕೇಸ್ ಹಾಕಲಾಗುತ್ತಿದೆ, ದೇಶವನ್ನ, ಪ್ರಜಾಪ್ರಭುತ್ವ ಉಳಿಸಲು ಜನರು ಮತದಾನದ ಮೂಲಕ ಇದಕ್ಕೆಲ್ಲ ಉತ್ತರ ನೀಡಬೇಕು ಎಂದರು.

ಬಿಹಾರದ ಮಾಜಿ ಡಿಸಿಎಂ ತೇಜಸ್ವಿ ಯಾದವ್ ಮಾತನಾಡಿ, ಮೋದಿ ಹೇಗೆ ಬಂದರು ಹಾಗೇ ವಾಪಸ್ ಹೋಗಲಿದ್ದಾರೆ, ನಮ್ಮ ಒಕ್ಕೂಟ ಎಲ್ಲೆ ಹೋದರು ಜನರ ಬೆಂಬಲ ಸಿಗುತ್ತಿದೆ. ಬಿಜೆಪಿಯಿಂದ ದೇಶವನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ, ನಾವು ನಿಮ್ಮ ಎಲ್ಲರ ಪರವಾಗಿ ಹೋರಾಟ ಮಾಡುತ್ತಿದ್ದೇವೆ, ಅದಕ್ಕಾಗಿ ನಿಮ್ಮೆಲ್ಲರ ಪ್ರೀತಿ ನಮ್ಮಗೆ ಬೇಕು, ಜನರು ದೇಶದ ಮಾಲೀಕರು, ಅಧಿಕಾರದಲ್ಲಿ ಯಾರು ಇರಬೇಕು ಎಂದು ನಿರ್ಧರಿಸುತ್ತಾರೆ, ಬಿಜೆಪಿ 400ರ ಗಡಿ ದಾಟಲಿದೆ ಎನ್ನುತ್ತಿದೆ, ಈಗಾಗಲೇ ಇವಿಎಂ ಸೆಟ್ಟಿಂಗ್ ಆಗಿದೆ ಅನಿಸುತ್ತೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ, ಅಧಿಕಾರದಲ್ಲಿರುವ ಜನರು ವಿಪಕ್ಷಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ, ಮೋದಿ ಎಲ್ಲವನ್ನು ಖಾಸಗಿಕರಣ ಮಾಡಿದ್ದಾರೆ, ಯಾವುದೇ ಉದ್ಯೋಗ ಸೃಷ್ಟಿ ಮಾಡಿಲ್ಲ, ನಮ್ಮ ಸರ್ಕಾರ ಇದ್ದ ಅಲ್ಪ ಅವಧಿಯಲ್ಲಿ ಐದು ಲಕ್ಷ ಉದ್ಯೋಗ ನೀಡಿದ್ದೇವೆ. ಮೋದಿ ದೇಶದ ರೈತರನ್ನು ಭೇಟಿ ಮಾಡುವುದಿಲ್ಲ, ಪ್ರಿಯಾಂಕಾ ಚೋಪ್ರಾ ಭೇಟಿ ಮಾಡ್ತಾರೆ, ಅಕ್ಷಯ್ ಕುಮಾರ್, ಬಿಲ್ ಗೇಟ್ಸ್ ಗೆ ಸಂದರ್ಶನ ನೀಡುತ್ತಾರೆ. ಈಗ ವಿಪಕ್ಷ ನಾಯಕರನ್ನು ಬಂಧಿಸುತ್ತಿದ್ದಾರೆ, ಇದಕ್ಕೆ ನಾವು ಹೆದರುವುದಿಲ್ಲ, ಕಣ್ಣು ತೆಗೆದು ಕನ್ನಡಕ ಕೊಡುತ್ತಾರೆ ಆಮೇಲೆ ಕನ್ನಡಕ ಕೊಟ್ಟೇವು ಅಂತಾ ಪ್ರಚಾರ ಮಾಡುತ್ತಾರೆ, ಮೋದಿ ಗ್ಯಾರಂಟಿ ಚೀನಾ ವಸ್ತುವಿನಂತೆ, ಹಿಂದೆ ಕೊಟ್ಟ ಭರವಸೆ ಏನಾಯಿತು ಅದರ ಬಗ್ಗೆ ಮಾತನಾಡುವುದಿಲ್ಲ ನಾಗಪುರಿ ಕಾನೂನು, ಆರ್‌ಎಸ್‌ಎಸ್ ಅಜೆಂಡಾ ಜಾರಿ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದರು.

ಪ್ರಜಾಪ್ರಭುತ್ವ ಅಪಾಯದಲ್ಲಿದೆ, ದೇಶ ಯಾರ ಅಪ್ಪನ ಆಸ್ತಿ ಅಲ್ಲ ಎಲ್ಲ ನಾಯಕರನ್ನು ಬಂಧಿಸಲಾಗುತ್ತಿದೆ, ಬ್ಯಾಂಕ್ ಖಾತೆ ನಿರ್ಬಂಧಿಸಲಾಗುತ್ತಿದೆ ನಾವು ಯಾವುದಕ್ಕೂ ಹೆದರುವುದಿಲ್ಲ, ಭಾರತದ ಮಾಲೀಕರು 140 ಕೋಟಿ ಜನರು, ಅರವಿಂದ್ ಕೇಜ್ರಿವಾಲ್‌ ಬಂಧಿಸಬಹುದು ಆದರೆ ಅವರ ಚಿಂತನೆಗಳನ್ನು ಹೇಗೆ ಬಂಧಿಸುತ್ತೀರಿ, ಈಗಾಗಲೇ ದೇಶದಲ್ಲಿ ಸಾಕಷ್ಟು ಕೇಜ್ರಿವಾಲ್ ಗಳು ಹುಟ್ಟಿದ್ದಾರೆ ಎಷ್ಟು ದೇಶವನ್ನು ಲೂಟಿ ಮಾಡುತ್ತೀರಿ ಮಾಡಿ ಶವದ ಮೇಲೆ ಹೊಚ್ಚುವ ಬಟ್ಟೆಗೆ ಜೇಬು ಇರಲ್ಲ, ಬಡವರ ಹಣ ಎಲ್ಲಿಗೆ ತಗೊಂಡು ಹೋಗುತ್ತೀರಿ ಎಂದು ಪಂಜಾಬ್ ಸಿಎಂ ಭಗವಂತ ಮಾನ್ ವಾಗ್ದಾಳಿ ನಡೆಸಿದರು.

===========

ಭಾರತವನ್ನು, ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ನಾವು ಹೋರಾಡುತ್ತಿದ್ದೇವೆ, ಬಿಜೆಪಿಯನ್ನು ಸೋಲಿಸುವ ಮೂಲಕ ದೇಶವನ್ನು ಉಳಿಸಬೇಕು, ಅರವಿಂದ್ ಕೇಜ್ರಿವಾಲ್ ಬಂಧಿಸಿರುವುದನ್ನು ನಾವು ಖಂಡಿಸುತ್ತೇವೆ ಕೇಂದ್ರ ಸರ್ಕಾರ ಇಡಿ ಐಟಿ ಯನ್ನು ಬಳಸಿಕೊಳ್ಳುತ್ತಿದೆ, ಮೋದಿ ಅವರೇ ಇದು ಯಶಸ್ವಿಯಾಗಲ್ಲ

– ಡಿ.ರಾಜಾ, ಕಮ್ಯುನಿಸ್ಟ್ ಪಾರ್ಟಿ

ದೇಶ ಕಷ್ಟದ ಪರಿಸ್ಥಿತಿಯಲ್ಲಿದೆ, ಜನರ ಚುನಾಯಿತ ಪ್ರತಿನಿಧಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ, ತನಿಖೆ ನಡೆಸದೆ ಜೈಲಿಗೆ ಹಾಕಲಾಗುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಕಳೆದ ಐದು ವರ್ಷಗಳಿಂದ ಇದೇ ಪರಿಸ್ಥಿತಿ ನೋಡುತ್ತಿದ್ದೇವೆ. ಕೇಜ್ರಿವಾಲ್ ಬಿಜೆಪಿ ಸೇರ್ಪಡೆಯಾಗಿದ್ದರೆ ಒಳ್ಳೆಯ ವ್ಯಕ್ತಿಯಾಗುತ್ತಿದ್ದರು. ಬಡವರ ಮಕ್ಕಳಿಗೆ ಶಾಲೆ ಮಾಡಿದ್ದು, ಜನರಿಗೆ ಉಚಿತ ವಿದ್ಯುತ್, ನೀರು, ಬಸ್ ನೀಡಿದ್ದು ಬಿಜೆಪಿಗೆ ಕಷ್ಟವಾಗುತ್ತಿದೆ

ಮಹೆಬೂಬಾ ಮುಫ್ತಿ – ಜೆ&ಕೆ ಮಾಜಿ ಮುಖ್ಯಮಂತ್ರಿ

ಈ ಬಾರಿ ಬಿಜೆಪಿ ಗಡಿಪಾರು ಆಗಲಿದೆ, ಪ್ರಜಾಪ್ರಭುತ್ವ ಉಳಿಯಲಿದೆ, ಪ್ರಜಾಪ್ರಭುತ್ವ ಉಳಿಸಲು ಇಂದಿನ ಸಮಾವೇಶದಲ್ಲಿ ಸೇರಿದ್ದೇವೆ, ಒಂದೇ ಪಕ್ಷದ ಆಡಳಿತ ದೇಶಕ್ಕೆ ಮಾರಕ ಬಹುಪಕ್ಷಗಳು ಸೇರಿ ಉತ್ತಮ ಆಡಳಿತ ನೀಡಿವೆ

ಉದ್ಧವ್ ಠಾಕ್ರೆ, ಶಿವಸೇನೆ ನಾಯಕ, ಮಹರಾಷ್ಟ್ರ ಮಾಜಿ ಸಿಎಂ

==============

ಜೈಲಿನಿಂದಲೇ ಆರು ಗ್ಯಾರಂಟಿ ಘೋಷಿಸಿದ ಅರವಿಂದ್ ಕೇಜ್ರಿವಾಲ್

ನವದೆಹಲಿ : ನನ್ನ ಪತಿ ಸಿಂಹ ಅವರನ್ನು ಹೆಚ್ಚು ದಿನ ಜೈಲಿನಲ್ಲಿ ಕೂಡಿ ಹಾಕಲು ಸಾಧ್ಯವಿಲ್ಲ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಹೇಳಿದ್ದಾರೆ. ಸಂವಿಧಾನ ಉಳಿಸಿ ಸಮಾವೇಶದಲ್ಲಿ ಮಾತನಾಡಿದ ಅವರು ಜೈಲಿನಿಂದ ಅರವಿಂದ್ ಕೇಜ್ರಿವಾಲ್ ಸಂದೇಶ‌ ಕಳುಹಿಸಿದ್ದಾರೆ, ಅದನ್ನು ಓದುವ ಮುನ್ನ ನಾನು ನಿಮಗೆ ಒಂದು ವಿಷಯ ಕೇಳಲು ಬಯಸುತ್ತೇನೆ, ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಪತಿಯನ್ನು ಜೈಲಿಗೆ ಹಾಕಿದ್ದಾರೆ, ಪ್ರಧಾನಿ ಮಾಡಿದ್ದು ಸರಿಯೇ? ಕೇಜ್ರಿವಾಲ್ ನಿಜವಾದ ದೇಶಭಕ್ತ ಮತ್ತು ಪ್ರಾಮಾಣಿಕ ವ್ಯಕ್ತಿ ಎಂದು ನೀವು ನಂಬುತ್ತೀರಾ? ಎಂದು ಜನರನ್ನ ಪ್ರಶ್ನಿಸಿದರು.

ಈ ಬಿಜೆಪಿಯವರು ಕೇಜ್ರಿವಾಲ್ ಜೈಲಿನಲ್ಲಿದ್ದಾರೆ, ಅವರು ರಾಜೀನಾಮೆ ನೀಡಬೇಕು ಎಂದು ಹೇಳುತ್ತಿದ್ದಾರೆ, ಅವರು ರಾಜೀನಾಮೆ ನೀಡಬೇಕೇ? ನಿಮ್ಮ ಕೇಜ್ರಿವಾಲ್ ಸಿಂಹ, ಅವರನ್ನು ಹೆಚ್ಚು ಕಾಲ ಜೈಲಿನಲ್ಲಿ ಇಡಲು ಅವರಿಗೆ ಸಾಧ್ಯವಿಲ್ಲ ಎಂದು ಸುನೀತಾ ಕೇಜ್ರಿವಾಲ್ ಗುಡಗಿದರು. ಸ್ವಾತಂತ್ಯ ಹೋರಾಟದಲ್ಲಿ ನನ್ನ ಪತಿ ಹೋರಾಟಗಾರನಾಗುದ್ದರು ಅನಿಸುತ್ತೆ ಇಂದು ಸಂವಿಧಾನ ಉಳಿವಿಗಾಗಿ ಹೋರಾಡುತ್ತಿದ್ದಾರೆ ಎಂದರು.

ಬಳಿಕ ಅರವಿಂದ್ ಕೇಜ್ರಿವಾಲ್ ಬರೆದ ಪತ್ರವನ್ನಯ ಓದಿದ ಅವರು, ನಾನು ಈ ಬಾರಿ ಮತ ಕೇಳಲ್ಲ, ಭಾರತ ಒಂದು ಮಹಾನ್ ದೇಶ, ತನ್ನದೇಯಾದ ಸಂಸ್ಕೃತಿ ಹೊಂದಿದೆ, ಆದರೂ ಭಾರತ ಬಡತನದಲ್ಲಿ ಯಾಕಿದೆ. ನಾನು ಜೈಲಿನಲ್ಲಿ ಯೋಚಿಸಲು ಸಾಕಷ್ಟು ಸಮಯ ಸಿಕ್ಕಿದೆ, ಭಾರತ ಮಾತೆಯ ಬಗ್ಗೆ ನಾನು ಯೋಚಿಸುತ್ತಿದ್ದೇನೆ, ಭಾರತಮಾತೆ ದುಖಃದಲ್ಲಿದ್ದಾಳೆ, ನೋವಿನಲ್ಲಿದ್ದಾಳೆ

ಅದಕ್ಕಾಗಿ 140 ಕೋಟಿ ಜನರು ಸೇರಿ ಬಡತನ, ನಿರುದ್ಯೋಗ ಇಲ್ಲದ ದೇಶ ಕಟ್ಟೊಣ, ಒಳ್ಳೆಯ ಶಿಕ್ಷಣ, ವೈದ್ಯಕೀಯ ಸೌಲಭ್ಯ ಸಿಗುವ ದೇಶ ನಿರ್ಮಿಸೋಣ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವಿಶ್ವ ನಾಯಕನಾಗುವ ದೇಶ ನಿರ್ಮಾಣ ಮಾಡೊಣ, ಆ ದೇಶದಲ್ಲಿ ದ್ವೇಷ ವೈರತ್ವ ಮುಕ್ತವಾಗಿರಲಿದೆ, ಇಂಡಿಯಾ ಒಕ್ಕೂಟ ಹೃದಯದಲ್ಲಿದೆ ಎಂದರು.

ನವ ಭಾರತ ನಿರ್ಮಾಣಕ್ಕಾಗಿ ಲೋಕಸಭೆ ಚುನಾವಣೆ ಹಿನ್ನಲೆ ಆರು ಗ್ಯಾರಂಟಿ ಘೋಷಣೆ ಮಾಡುತ್ತಿದ್ದೇನೆ, ಪೂರ್ತಿ ದೇಶದಲ್ಲಿ 24 ಗಂಟೆ ವಿದ್ಯುತ್ ದೊರೆಯಲಿದೆ, ಬಡವರಿಗೆ ವಿದ್ಯುತ್ ಉಚಿತ ಸಿಗಲಿದೆ. ಪ್ರತಿ ಊರಿನಲ್ಲಿ ಒಳ್ಳೆಯ ಶಾಲೆ ನಿರ್ಮಾಣ ಮಾಡಲಿದ್ದೇವೆ, ಪ್ರತಿ ನಗರದಲ್ಲಿ ಅತ್ಯುತ್ತಮ ಸರ್ಕಾರಿ ಆಸ್ಪತ್ರೆ ನಿರ್ಮಿಸಿ ಉಚಿತ ಚಿಕಿತ್ಸೆ ನೀಡಲಾಗುವುದು, ರೈತರಿಗೆ ಸ್ವಾಮಿನಾಥನ್ ವರದಿ ಅನುಷ್ಠಾನ ಜಾರಿ ಮಾಡುತ್ತೇವೆ ಕಡೆಯದಾಗಿ ದೆಹಲಿ ಜನರಿಗಾಗಿ ದೆಹಲಿಗೆ ಪೂರ್ಣ ರಾಜ್ಯದ ಅಸ್ತಿತ್ವ ನೀಡಲಾಗುವುದು ಎಂದು ಕೇಜ್ರಿವಾಲ್ ಪತ್ರವನ್ನು ಸುನೀತಾ ಓದಿದರು.

Previous Post
ಎಲ್‌.ಕೆ ಅಡ್ವಾಣಿಗೆ ಭಾರತ ರತ್ನ ಪ್ರಧಾನ
Next Post
ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್ ಗೆ 15 ದಿನ ನ್ಯಾಯಾಂಗ ಬಂಧನ

Recent News