ವಿಪತ್ತು ಪೀಡಿತ ಪ್ರದೇಶಗಳಲ್ಲಿ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ

ವಿಪತ್ತು ಪೀಡಿತ ಪ್ರದೇಶಗಳಲ್ಲಿ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ

ವಯನಾಡು: ಇತ್ತೀಚೆಗೆ ಕೇರಳದ ವಯನಾಡಿನಲ್ಲಿ ಭೂಕುಸಿತ ಸಂಭವಿಸಿದ್ದ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದು ಭೇಟಿ ನೀಡಿ ವಿಪತ್ತು ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಬಳಿಕ ಸರ್ಕಾರ ಕೈಗೊಂಡ ಪರಿಹಾರ ಮತ್ತು ಪುನರ್ವಸತಿ ಕ್ರಮಗಳ ಕುರಿತು ಪರಿಶೀಲಿಸಿದರು. ಇದಕ್ಕೂ ಮುನ್ನ ಬೆಳಗ್ಗೆ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು, ಕೇರಳ ಸಿಎಂ ಪಿಣರಾಯಿ ವಿಜಯನ್‌ ಸರಳ, ಸಾಂಪ್ರದಾಯಿಕವಾಗಿ ಕೈಮುಗಿದು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇಂದ್ರ ಪ್ರವಾಸೋದ್ಯಮ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಉಪಸ್ಥಿತರಿದ್ದರು.  ಸ್ವಾಗತ ಸ್ವೀಕರಿಸಿ ಬಳಿಕ ಮೋದಿ, ಸಿಎಂ ಜೊತೆಗೂಡಿ ವೈಮಾನಿಕ ಸಮೀಕ್ಷೆ ನಡೆಸಿದರು. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಭೂಕುಸಿತದಿಂದ ಧ್ವಂಸಗೊಂಡ ಚೂರಲ್ಮಲಾ, ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಕುಗ್ರಾಮಗಳ ವೈಮಾನಿಕ ಸಮೀಕ್ಷೆ ನಡೆಸಿದರು.  ಸಮೀಕ್ಷೆ ಮುಗಿದ ಬಳಿಕ ಸೇಂಟ್ ಜೋಸೆಫ್ ಹೈಸ್ಕೂಲ್‌ನಲ್ಲಿ ಸ್ಥಾಪಿಸಲಾದ ಪರಿಹಾರ ಶಿಬಿರಕ್ಕೆ ಭೇಟಿ ನೀಡಲು ನೀಡಿ, ಅಲ್ಲಿ ಪೋಷಕರಿಬ್ಬರನ್ನೂ ಕಳೆದುಕೊಂಡ ಮಕ್ಕಳು ಸೇರಿದಂತೆ ಬದುಕುಳಿದವರನ್ನು ಭೇಟಿಯಾದರು. ಕಲ್ಪೆಟ್ಟಾದ ಎಸ್‌ಕೆಎಂಜೆ ಹೈಯರ್ ಸೆಕೆಂಡರಿ ಶಾಲೆಗೆ ತೆರಳಿ ಅಲ್ಲಿಂದ ರಸ್ತೆ ಮೂಲಕ ಭೂಕುಸಿತ ಪೀಡಿತ ಪ್ರದೇಶಗಳಿಗೆ ಮೋದಿ ನೀಡಿ ಪರಿಶೀಲಿಸಿದರು. ಕೇರಳ ಪೊಲೀಸ್ ಎಡಿಜಿಪಿ ಅಜಿತ್ ಕುಮಾರ್ ಅವರು ಚೂರಲ್ಮಲಾದಲ್ಲಿ ಹಾನಿಯ ಬಗ್ಗೆ ಪ್ರಧಾನಿ ಮೋದಿಯವರಿಗೆ ವಿವರಿಸಿದರು. ನಂತರ ಪ್ರಧಾನಿ ಮೋದಿ ಚೂರಲ್‌ಮಲಾ ಸರ್ಕಾರಿ ಶಾಲಾ ರಸ್ತೆಯಲ್ಲಿ ಹಾನಿಗೊಳಗಾದ ಪ್ರದೇಶಗಳ ಮೂಲಕ ನಡೆದು ಹಾನಿಯ ಅಂದಾಜು ಮಾಡಿದರು. ಜುಲೈ 30 ರಂದು ಸಂಭವಿಸಿದ ದುರಂತದಲ್ಲಿ ಕನಿಷ್ಠ 226 ಜೀವಗಳನ್ನು ಬಲಿಯಾಗಿದ್ದು, ಇನ್ನೂ ಅನೇಕರು ನಾಪತ್ತೆಯಾಗಿದ್ದಾರೆ. ಕೇರಳದಲ್ಲಿ ಸಂಭವಿಸಿದ ಅತ್ಯಂತ ಭೀಕರ ನೈಸರ್ಗಿಕ ವಿಕೋಪಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗಿದೆ.

Previous Post
ವಯನಾಡ್ ಭೂಕುಸಿತ: ಕೇರಳ ಹೈಕೋರ್ಟಿನಿಂದ ಸ್ವಯಂಪ್ರೇರಿತ ವಿಚಾರಣೆ
Next Post
ನೂತನ ಸಹಕಾರಿ ಬ್ಯಾಂಕಿಂಗ್‌ ತಿದ್ದುಪಡಿ ಮಸೂದೆ ಮಂಡನೆಗೆ ಸಿದ್ದತೆ ನಡೆಸಿದ ಕೇಂದ್ರ ಸರ್ಕಾರ ; ಠೇವಣಿದಾರರಿಗೆ ಮತ್ತಷ್ಟು ಸುರಕ್ಷತೆ

Recent News