ಸೂರತ್ ನಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ

ಸೂರತ್ ನಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ

ಸೂರತ್‌: 2024ರ ಲೋಕಸಭಾ ಚುನಾವಣೆ ಮುಕ್ತಾಯವಾಗುವುದಕ್ಕೂ ಮುನ್ನವೇ ಬಿಜೆಪಿ ಮೊದಲ ಖಾತೆ ತೆರೆದಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಸೂರತ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನೀಲೇಶ್‌ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ಅಲ್ಲದೇ ನಾಮಪತ್ರ ಸಲ್ಲಿಸಿದ್ದ ಉಳಿದ 8 ಮಂದಿ ಸ್ವತಂತ್ರ ಅಭ್ಯರ್ಥಿಗಳೂ ಹಿಂದೆ ಸರಿದಿದ್ದರು. ಹೀಗಾಗಿ ಮತದಾನ ನಡೆಯದೇ ಗೆಲುವು ಬಿಜೆಪಿ ಪಾಲಾಯಿತು. ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮಾಹಿತಿಯನ್ನು ದೆಹಲಿ ಬಿಜೆಪಿ ಘಟಕದ ಮಾಧ್ಯಮ ವಕ್ತಾರ ಅಂಕಿತ್ ಜೈನ್ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ ನಾಮಪತ್ರದಲ್ಲಿನ ಸಹಿಗಳು ತಮ್ಮದಲ್ಲ ಎಂದು ಮೂವರು ಸೂಚಕರು ವಕೀಲರ ಮೂಲಕ ಚುನಾವಣಾಧಿಕಾರಿಗೆ ಪ್ರಮಾಣ ಪತ್ರ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿದ್ದ ಚುನಾವಣಾಧಿಕಾರಿಗಳು ಸಹಿಯನ್ನು ಪರಿಶೀಲಿಸಿದ್ದರು. ಪರಿಶೀಲಿಸಿದ ಬಳಿಕ ನಾಮಪತ್ರಗಳಲ್ಲಿನ ಸೂಚಕರ ಸಹಿಯಲ್ಲಿ ವ್ಯತ್ಯಾಸಗಳಿದ್ದವು ಮತ್ತು ಅವು ನಿಜವಲ್ಲ ಎಂದು ತಿಳಿದುಬಂದಿದ್ದರಿಂದ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಸೌರಭ್ ಪರ್ಧಿ ತಿಳಿಸಿದ್ದಾರೆ. ತನ್ನ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದೆ.

Previous Post
ನಿತ್ಯ ವೈದ್ಯರ ಸಲಹೆ ಪಡೆಯಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಜೈಲಿನಲ್ಲಿ ವೈದ್ಯರ ಸಲಹೆ ಪಡೆಯಲು ಕೇಜ್ರಿವಾಲ್ ಗೆ ಸೂಚನೆ
Next Post
ಬರ ಪರಿಹಾರ ಬಿಡುಗಡೆಗೆ ಈ ವಾರದಲ್ಲಿ ಕ್ರಮ – ಸುಪ್ರೀಂಕೋರ್ಟ್ ಗೆ ಕೇಂದ್ರ ಸರ್ಕಾರದ ಭರವಸೆ – ರಾಜ್ಯ ಸರ್ಕಾರದ ಕಾನೂನು ಹೋರಾಟಕ್ಕೆ ಜಯ

Recent News